ADVERTISEMENT

ಹೆಸರಘಟ್ಟದ ಸೋಮಶೆಟ್ಟಿ ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 21:05 IST
Last Updated 25 ಜನವರಿ 2021, 21:05 IST
ಇತಿಹಾಸ ತಜ್ಞ ಕೆ.ಅರ್.ನರಸಿಂಹ ಮತ್ತು ಸಂಶೋಧಕ ಕೆ.ಧನಪಾಲ್ ಅವರು ವಿಜಯನಗರ ಕಾಲದ ಶಾಸನ ಓದುತ್ತಿರುವುದು
ಇತಿಹಾಸ ತಜ್ಞ ಕೆ.ಅರ್.ನರಸಿಂಹ ಮತ್ತು ಸಂಶೋಧಕ ಕೆ.ಧನಪಾಲ್ ಅವರು ವಿಜಯನಗರ ಕಾಲದ ಶಾಸನ ಓದುತ್ತಿರುವುದು   

ಹೆಸರಘಟ್ಟ: ಮುಖ್ಯರಸ್ತೆಯಲ್ಲಿರುವ ಸೋಮಶೆಟ್ಟಿ ಗ್ರಾಮದಲ್ಲಿ ಕ್ರಿ.ಶ.1434ನೇ ಇಸವಿಗೆ ಸಂಬಂಧಿಸಿದ ವಿಜಯನಗರದ ಪ್ರೌಢ ದೇವರಾಯ ಅರಸನ ಕಾಲದ ಶಿಲಾ ಶಾಸನ ಪತ್ತೆಯಾಗಿದೆ.

ಗ್ರಾಮದ ನಿವಾಸಿ ಜನಾರ್ದನ ಅವರ ನಿವೇಶನ ಬಳಿ ಈ ಶಾಸನ ಕಲ್ಲು ಇದ್ದು, ನಿತ್ಯ ಅವರು ಪೂಜೆ ಮಾಡುತ್ತಿದ್ದರು. ಅಂಜನೇಯ ಸ್ವಾಮಿ ದೇವಸ್ಥಾನ ಅರ್ಚಕ ಗೋಪಾಲಕೃಷ್ಣ ನೆರವಿನೊಂದಿಗೆ ಸಂಶೋಧಕ ಕೆ. ಧನಪಾಲ್, ಇತಿಹಾಸ ತಜ್ಞ ಕೆ.ಅರ್.ನರಸಿಂಹನ್, ಯುವರಾಜ್, ಡಾ.ಎಸ್.ಕೆ. ಅರುಣಿ ಶಾಸನವನ್ನು ಮೊದಲ ಬಾರಿಗೆ ಓದುವ ಪ್ರಯತ್ನ ಮಾಡಿದ್ದು, ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಿದೆ.

‘ಶಾಸನದ ಕಲ್ಲು 5 ಅಡಿ ಎತ್ತರ ಎರಡು ಅಡಿ ಅಗಲವಿದ್ದು ಶಿಲೆಯ ಮೂರು ಬದಿಗಳಲ್ಲಿ ಶಾಸನ ಬರೆಯಲಾಗಿದೆ. ಪ್ರಾಯಶಃ ಶಾಸನ ಶಿಲೆಯನ್ನು ಸ್ತಂಭದ ಮೇಲೆ ಪ್ರತಿಷ್ಠಾಪಿಸಿದ್ದಂತೆ ಕಾಣುತ್ತದೆ. ಶಾಸನವನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ’ ಎಂದು ಇತಿಹಾಸ ತಜ್ಞ ಕೆ.ಆರ್.ನರಸಿಂಹನ್ ತಿಳಿಸಿದರು.

ADVERTISEMENT

‘ಶಾಸನವು ಬೆಂಗಳೂರು ಪರಿಸರದ ಪ್ರಾಚೀನ ಆಡಳಿತ ವಿಭಾಗವಾಗಿದ್ದ ಮಹಾ-ಎಲಹಕ್ಕ ನಾಡಿನ ಪ್ರಸ್ತಾಪವಿದೆ. ವಿಜಯನಗರದ ಅರಸರು ವಿವಿಧ ವರ್ಗದವರಿಗೆ ಉಂಬಳಿಯನ್ನು ಸೂರ್ಯ ಗ್ರಹಣದ ದಿನದಂದು ದಾನವಾಗಿ ನೀಡಿದ ವಿವರಣೆಯನ್ನು ಶಾಸನದಲ್ಲಿ ಬರೆಯಲಾಗಿದೆ. ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲಕ್ಕೂ ಪೂರ್ವದ ಈ ಶಾಸನವೂ ನಾಡಿನ ಇತಿಹಾಸಕ್ಕೆ ಒಂದು ಹೊಸ ಸೇರ್ಪಡೆಯಾಗಿದೆ' ಎಂದು ಅವರು ಹೇಳಿದರು.

ಶಾಸನದ ಅರ್ಧ ಭಾಗ ನೆಲದಲ್ಲಿ ಹೂತು ಹೋಗಿದ್ದು, ಹೊರತೆಗೆದ ಮೇಲೆ ಹೆಚ್ಚಿನ ವಿಷಯಗಳು ಲಭ್ಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.