ADVERTISEMENT

‘ಅನಂತ ಕುಮಾರ್‌ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿ’

62ನೇ ಜನ್ಮ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 22:13 IST
Last Updated 22 ಸೆಪ್ಟೆಂಬರ್ 2021, 22:13 IST
ಅನಂತ್‌ ಕುಮಾರ್
ಅನಂತ್‌ ಕುಮಾರ್   

ಬೆಂಗಳೂರು: ಕೇಂದ್ರದ ಮಾಜಿ ಸಚಿವ ದಿವಂಗತ ಎಚ್‌.ಎನ್‌. ಅನಂತ ಕುಮಾರ್‌ ಅವರ ಜತೆಗಿನ ಒಡನಾಟ, ಸಾಧನೆಗಳು ಹಾಗೂ ಸೇವೆಯನ್ನು ಪ್ರಮುಖರು, ರಾಜಕಾರಣಿಗಳು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಬುಧವಾರ ಆತ್ಮೀಯವಾಗಿ ಸ್ಮರಿಸಿದರು.

ಅದಮ್ಯ ಚೇತನ ಮತ್ತು ಅನಂತಕುಮಾರ್ ಪ್ರತಿಷ್ಠಾನ ಆಯೋಜಿಸಿದ್ದ ಅನಂತ ಕುಮಾರ್‌ ಅವರ62ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಬಲಪಡಿಸುವಲ್ಲಿ ಅವರು ವಹಿಸಿದ ಪ್ರಮುಖ ಪಾತ್ರ ಮತ್ತುಕೇಂದ್ರ ಸಚಿವರಾಗಿ ಅವರು ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಳ್ಳಲಾಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿ, ‘ಪಕ್ಷ ಸಂಘಟನೆಯಲ್ಲಿ ಬಲಿಷ್ಠ ಶಕ್ತಿಯಾಗಿದ್ದ ಅನಂತ ಕುಮಾರ್‌ ಅವರು, ಜನನಾಯಕರಾಗಿದ್ದರು.ಸಾವಿರಾರು ಕಾರ್ಯಕರ್ತರಿಗೆ ಸ್ಫೂರ್ತಿದಾಯಕರಾಗಿದ್ದರು’ ಎಂದು ಸ್ಮರಿಸಿದರು.

‘ರಾಜಕಾರಣದಲ್ಲಿ ಜನರವಿಶ್ವಾಸ ಗಳಿಸುವುದು ಸುಲಭವಲ್ಲ. ವಿಶ್ವಾಸ ಗಳಿಸಿದರೂ ಕಾಯಂ ಆಗಿ ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಅನಂತ ಕುಮಾರ್‌ ಅವರು ಈ ವಿಷಯದಲ್ಲಿಎಂದಿಗೂ ನಿರಾಶೆ ಮಾಡಲಿಲ್ಲ. ಜನರ ಮಧ್ಯೆ ಇದ್ದು, ಅವರ ಮತ್ತು ಪಕ್ಷದ ವಿಚಾರಗಳನ್ನು ಬಿಂಬಿಸಿ ವಿಶ್ವಾಸಾರ್ಹತೆ ಗಳಿಸಿದ್ದರು’ ಎಂದು ಬಣ್ಣಿಸಿದರು.

ADVERTISEMENT

ಸಚಿವರಾದ ಕೆ.ಎಸ್‌. ಈಶ್ವರಪ್ಪ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಬಿ.ಸಿ. ನಾಗೇಶ್‌,ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ ಅವರು, ಅನಂತಕುಮಾರ್‌ ಅವರು ಸುಮಾರುಎರಡೂವರೆ ದಶಕಗಳ ಕಾಲ ರಾಷ್ಟ್ರ ರಾಜಕಾರಣ ಮತ್ತು ರಾಜ್ಯ ಬಿಜೆಪಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಬಗ್ಗೆ ಸ್ಮರಿಸಿದರು.

ತೇಜಸ್ವಿನಿಅನಂತಕುಮಾರ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿಯಲ್ಲಿಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿಪ್ರತಿಭಾ ಪುರಸ್ಕಾರ ನೀಡಲಾಯಿತು. ಆನ್‌ಲೈನ್‌ ವೇದಿಕೆ ಮೂಲಕ ಈ ಕಾರ್ಯಕ್ರಮ ನಡೆಯಿತು.

*

ರಾಷ್ಟ್ರಮಟ್ಟದಲ್ಲಿ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದ ಅನಂತ ಕುಮಾರ್‌ ಅವರು, ಸದಾ ಜನಪರ ಕಾಳಜಿಯ ವ್ಯಕ್ತಿತ್ವ ಹೊಂದಿದ್ದರು.ಅವರು ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದ್ದಾರೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*

ತೇಜಸ್ವಿನಿ ಅನಂತ ಕುಮಾರ್‌ ಅವರ ಸೇವೆ ರಾಜ್ಯಕ್ಕೆ ಮತ್ತು ದೇಶಕ್ಕೆ ಬೇಕು. ಅನಂತ ಕುಮಾರ್ ಅವರ ಕನಸುಗಳನ್ನು ಈಡೇರಿಸಲು ಅವರು ಶ್ರಮಿಸಬೇಕು.
-ಮುರುಗೇಶ್‌ ನಿರಾಣಿ, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.