ಬೆಂಗಳೂರು: ಅಂದ್ರಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಇಬ್ಬರು ಮಕ್ಕಳಿಂದ ಸ್ವಚ್ಛಗೊಳಿಸಿರುವ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಟಿ. ಲಕ್ಷ್ಮಿದೇವಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಅಂದ್ರಹಳ್ಳಿಯ ಸರ್ಕಾರಿ ಶಾಲೆಯ ಶೌಚಾಲಯ ಗಲೀಜಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರು ವಿದ್ಯಾರ್ಥಿಗಳು, ಶೌಚಾಲಯ ಸ್ವಚ್ಛಗೊಳಿಸುವ ಆ್ಯಸಿಡ್ ಹಾಕಿ ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದರು. ಇದೇ ಸಂದರ್ಭದಲ್ಲಿ ಶೌಚಾಲಯಕ್ಕೆ ಬಂದಿದ್ದ ಇಬ್ಬರು ಸ್ಥಳೀಯರು, ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೊ ಚಿತ್ರೀಕರಿಸಿದ್ದರು.
ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಶಾಲೆಗೆ ಭೇಟಿ ನೀಡಿದ ಉತ್ತರ ವಲಯ–01ರ ಕ್ಷೇತ್ರ ಶಿಕ್ಷಣಾಧಿಕಾಆರಿ ಕೆ.ಜಿ. ಆಂಜನಪ್ಪ ಅವರು ವಿದ್ಯಾರ್ಥಿಗಳು ಹಾಗೂ ಇತರರ ಹೇಳಿಕೆ ದಾಖಲಿಸಿಕೊಂಡು, ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ವರದಿ ಪರಿಗಣಿಸಿದ ಉತ್ತರ ಜಿಲ್ಲೆಯ ಉಪನಿರ್ದೇಶಕ ಲೋಹಿತಾಶ್ವ ರೆಡ್ಡಿ ಅವರು, ಲಕ್ಷ್ಮೀದೇವಮ್ಮ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಭೆಯಲ್ಲಿ ಪ್ರಸ್ತಾಪ: ‘ಇಲಾಖೆ ಪ್ರಗತಿ ಪರಿಶೀಲನೆ ಸಂಬಂಧ ಕಚೇರಿಯಲ್ಲಿ ಸಭೆ ನಡೆಸಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಸಭೆಗೆ ಬಂದಿದ್ದ ಸ್ಥಳೀಯರೊಬ್ಬರು, ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಿದ್ದ ವಿಡಿಯೊ ತೋರಿಸಿದ್ದರು. ಇಂಥ ಘಟನೆಗಳು ಪದೇ ಪದೆ ನಡೆಯುತ್ತಿರುವುದಾಗಿ ದೂರಿದ್ದರು. ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಶಾಲೆಗೆ ಭೇಟಿ ನೀಡಿದೆ’ ಎಂದು ಶಿಕ್ಷಣಾಧಿಕಾರಿ ಕೆ.ಜಿ. ಆಂಜನಪ್ಪ ತಿಳಿಸಿದರು.
‘ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದರು. ಎಲ್ಲರ ಅಹವಾಲು ಆಲಿಸಿದೆ. ಶೌಚಾಲಯ ಸ್ವಚ್ಛಗೊಳಿಸಿದ್ದ ಇಬ್ಬರು ಮಕ್ಕಳ ಪೈಕಿ, ಒಬ್ಬನನ್ನು ಮಾತನಾಡಿಸಿ ಮಾಹಿತಿ ಪಡೆದಿದ್ದೇನೆ. ಇನ್ನೊಬ್ಬ ವಿದ್ಯಾರ್ಥಿ, ಶಾಲೆಗೆ ಗೈರಾಗಿದ್ದಾನೆ. ಆತನನ್ನೂ ಮಾತನಾಡಿಸುವೆ’ ಎಂದು ಹೇಳಿದರು.
ಹಲವು ವರ್ಷಗಳ ಸ್ಥಿತಿ: ‘ಅಂದ್ರಹಳ್ಳಿ ಸರ್ಕಾರಿ ಶಾಲೆಯ ಬಗ್ಗೆ ಎಲ್ಲರೂ ನಿರ್ಲಕ್ಷ್ಯ ವಹಿಸಿದ್ದಾರೆ. ಶೌಚಾಲಯ ಸ್ಥಿತಿ ತುಂಬಾ ಹದಗೆಟ್ಟಿದೆ. ಇಂಥ ಶೌಚಾಲಯವನ್ನು ವಿದ್ಯಾರ್ಥಿಗಳಿಂದಲೇ ಪದೇ ಪದೇ ಸ್ವಚ್ಛಗೊಳಿಸಲಾಗುತ್ತಿದೆ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
‘ಶಾಲೆಯಲ್ಲಿ 643 ಮಕ್ಕಳಿದ್ದಾರೆ. ಶೌಚಾಲಯ ಸ್ವಚ್ಛಗೊಳಿಸಲು ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಮಕ್ಕಳಿಗೆ ಶೌಚಾಲಯ ಸ್ವಚ್ಛಗೊಳಿಸುವಂತೆ ನಾನು ಹೇಳಿಲ್ಲ. ಅಂದು ನಾನು ರಜೆ ಮೇಲಿದ್ದೆ’ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ಸುದ್ದಿಗಾರರಿಗೆ ತಿಳಿಸಿದರು.
‘ವಿಡಿಯೊ ನೋಡಿದಾಗಲೇ ನನಗೂ ವಿಷಯ ಗೊತ್ತಾಗಿದೆ. ನಾನು ಮುಖ್ಯ ಶಿಕ್ಷಕಿಯಾಗಿ ಶಾಲೆಗೆ ಬಂದಾಗಿನಿಂದಲೂ ಕೆಲವರು ಸುಖಾಸುಮ್ಮನೇ ಬಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ಅವರು ದೂರಿದರು.
ಮೈಸೂರು: ‘ಬೆಂಗಳೂರಿನ ಯಶವಂತಪುರದ ಅಂದ್ರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಷಯ ಗಮನಕ್ಕೆ ಬಂದಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ
ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಲೆ ಅಥವಾ ಹಾಸ್ಟೆಲ್ ಹಂತದಲ್ಲಿ ಏನಾಗಿದೆ ಎಂಬುದು ಗೊತ್ತಾಗುವುದಿಲ್ಲ. ಎಲ್ಲವನ್ನೂ ಗಮನಿಸುವುದಕ್ಕಾಗಿಯೇ ವಿಚಕ್ಷಣ ದಳ ರಚಿಸಲು ಸೂಚಿಸಿರುವೆ’ ಎಂದರು.
‘ಅಲ್ಲೊಂದು, ಇಲ್ಲೊಂದು ಘಟನೆ ನಡೆಯುತ್ತದೆ. ಇಂಥವು ಸಾಮಾನ್ಯವಾಗಿ ಹೋಗಿವೆ ಎನ್ನುವುದು ಬೇಡ. ನಾವು ಯಾರನ್ನೂ ರಕ್ಷಿಸುವುದಿಲ್ಲ’ ಎಂದರು.
ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿರುವುದರ ಪರಿಣಾಮ ಮಾಲೂರಿನ ಬಳಿಕ ಅಂದ್ರಹಳ್ಳಿಯಲ್ಲಿ ಶಾಲಾ ಮಕ್ಕಳಿಂದಲೇ ಶೌಚಾಲಯವನ್ನು ಸ್ವಚ್ಛ ಮಾಡಿಸಿರುವ ಘಟನೆ ಮರುಕಳಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.
ಅಂದ್ರಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಲೂರಿನ ಪ್ರಕರಣದ ಕಹಿ ನೆನಪು ಮಾಸುವುದಕ್ಕೂ ಮೊದಲೇ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಶಾಲೆಯಲ್ಲೇ ಅದೇ ರೀತಿಯ ಘಟನೆ ಮರುಕಳಿಸಿದೆ. ಇದು ದುರದೃಷ್ಟಕರ ಎಂದರು.
ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾನೂನಿನ ಅರಿವು ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಲಾಖೆ ಮುಖ್ಯಸ್ಥರು ಸರಿ ಇದ್ದರೆ ಇಡೀ ಇಲಾಖೆಯ ವ್ಯವಸ್ಥೆ ಸರಿ ಇರುತ್ತದೆ. ಈಗಾಗಲೇ ಒಂದು ಘಟನೆ ನಡೆದಿರುವ ಬೆನ್ನಲ್ಲೇ ಮತ್ತೆ ಮಕ್ಕಳ ಕೈಯಲ್ಲೇ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ ಎಂದರೆ ಏನರ್ಥ? ಈ ಸರ್ಕಾರ ಜನತೆಯ ಪಾಲಿಗೆ ಸತ್ತಂತಿದೆ. ಆದ್ದರಿಂದಲೇ ಇಂಥ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.