ADVERTISEMENT

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಬೆಂಗಳೂರಲ್ಲಿ ಅಂಗನವಾಡಿ ನೌಕರರು, ರೈತರ ಪ್ರತಿಭಟನೆ

* ₹15 ಸಾವಿರ ಗೌರವಧನಕ್ಕೆ ಆಗ್ರಹ * ರೈತರ ಸಾಲ ಮನ್ನಾಗೆ ಒತ್ತಾಯ * ಹಸುಗಳ ಸಮೇತ ಬಿಜೆಪಿ ಹೋರಾಟ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 15:45 IST
Last Updated 6 ಫೆಬ್ರುವರಿ 2024, 15:45 IST
<div class="paragraphs"><p>ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು </p></div>

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ADVERTISEMENT

₹ 15 ಸಾವಿರ ಗೌರವಧನಕ್ಕೆ ಆಗ್ರಹ: ‘ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ₹ 15 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು, ತಮ್ಮ ಮಕ್ಕಳನ್ನೂ ಪ್ರತಿಭಟನೆಗೆ ಕರೆತಂದಿದ್ದರು. 

‘ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ಆದರೆ, ಸಂಬಳ ಮಾತ್ರ ತೀರಾ ಕಡಿಮೆ. ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯಯುತವಾಗಿ ₹ 35 ಸಾವಿರ ವೇತನ ನೀಡಬೇಕು. ಇದೀಗ, ತಿಂಗಳಿಗೆ ಕನಿಷ್ಠ ₹15 ಸಾವಿರ ಗೌರವಧನವನ್ನಾದರೂ ಸರ್ಕಾರ ನೀಡಬೇಕು. ಈ ಪ್ರಮುಖ ಬೇಡಿಕೆ ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ದೇಶದಾದ್ಯಂತ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

‘ವೈದ್ಯಕೀಯ ಸಹಾಯಧನ ಹೆಚ್ಚಿಸಬೇಕು. ಸೇವಾ ಹಿರಿತನ ಆಧರಿಸಿ ಬಡ್ತಿ ನೀಡಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಗೌರವಧನ ಪಾವತಿಸಬೇಕು. ವರ್ಷಕ್ಕೆ 2 ಜೊತೆ ಸಮವಸ್ತ್ರ ನೀಡಬೇಕು. ಮೊಬೈಲ್‍ಗಳಿಗೆ ರೀಚಾರ್ಜ್ ಮಾಡಿಸಬೇಕು. ಮಾತೃಪೂರ್ಣ ಯೋಜನೆ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಮನೆಗೆ ನೀಡಲು ಆದೇಶ ಹೊರಡಿಸಬೇಕು. ಖಾಲಿ ಇರುವ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಮಿನಿ ಅಂಗನವಾಡಿಗಳನ್ನು ವಿಸ್ತರಣೆ ಮಾಡಬೇಕು’ ಎಂದೂ ಪ್ರತಿಭಟನಕಾರರು ಆಗ್ರಹಿಸಿದರು.

ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘ: ‘ವಿದ್ಯುತ್ ಮಸೂದೆ–2022 ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿನಿಧಿಗಳು, ಬೇಡಿಕೆ ಈಡೇರಿಕೆಗಾಗಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

‘ವಿದ್ಯುತ್ ಮಸೂದೆ ಜನ ವಿರೋಧಿಯಾಗಿದೆ. ಜನಸಾಮಾನ್ಯರಿಗೆ ಆರ್ಥಿಕವಾಗಿ ಹೊಡೆತ ಬೀಳಲಿದೆ. ಹೀಗಾಗಿ, ಮಸೂದೆಯನ್ನು ರದ್ದುಗೊಳಿಸಬೇಕು. ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಬಾರದು. ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಗ್ರಾಹಕರು ಹಾಗೂ ರೈತರಿಗೆ ಕಡಿಮೆ ದರದಲ್ಲಿ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರೈತರ ಸಾಲ ಮನ್ನಾಗೆ ಆಗ್ರಹ: ‘ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲ ರೈತರ ಸಾಲ ಮನ್ನಾ ಮಾಡಬೇಕು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ‘ಬೆಂಗಳೂರು ಚಲೊ’ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರು.

‘ಮಳೆ ಇಲ್ಲದಿದ್ದರಿಂದ ಬೆಳೆ ಕೈಗೆ ಬಂದಿಲ್ಲ. ರೈತರು ಹಾಗೂ ಅವರ ಕುಟುಂಬದವರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸಾಲಗಾರರ ಕಾಟವೂ ಹೆಚ್ಚಾಗಿದೆ. ಸಾಲಕ್ಕೆ ಬೇಸತ್ತು ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಹೀಗಾಗಿ, ಸರ್ಕಾರ ರೈತರ ಸಾಲಗಳನ್ನು ಮನ್ನಾ ಮಾಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಕಬ್ಬು ಕಟಾವು ಹಾಗೂ ಸಾಗಾಣಿಕೆ ದರದ ಹೆಸರಿನಲ್ಲಿ ಕಡಿತ ಮಾಡಿರುವ ಹೆಚ್ಚುವರಿ ಹಣವನ್ನು ಕಾರ್ಖಾನೆಗಳಿಂದ ರೈತರಿಗೆ ವಾಪಸ್ ಕೊಡಿಸಬೇಕು. ಎಲ್ಲ ಬೆಳೆಗಳಿಗೆ ವಿಮೆ ಜಾರಿಗೊಳಿಸಬೇಕು. ಕೃಷಿ ಸಾಲ ನೀತಿ ಬದಲಾಯಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಸಚಿವ ಡಿ. ಸುಧಾಕರ್ ಮನವಿ ಸ್ವೀಕರಿಸಿದರು. ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಹಸುಗಳ ಸಮೇತ ಪ್ರತಿಭಟನೆ: ‘ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹಧನ ನೀಡಬೇಕು’ ಎಂದು ಆಗ್ರಹಿಸಿ ಬಿಜೆಪಿ ಬೆಂಗಳೂರು ಮಹಾನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ಹಸುಗಳ ಸಮೇತ ಬಂದಿದ್ದ ಪ್ರತಿಭಟನಕಾರರು, ವಿಧಾನಸೌಧದತ್ತ ಹೊರಡಲು ಮುಂದಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು ತಡೆದರು. ಹಸುಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಪ್ರತಿಭಟನಕಾರರಿಗೆ ಹೇಳಿದರು. ಪ್ರತಿಭಟನಕಾರರು ಒಪ್ಪದಿದ್ದಾಗ, ಪೊಲೀಸರೇ ಹಸುಗಳನ್ನು ಬೇರೆಡೆ ಸಾಗಿಸಿದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಹಸುಗಳ ಸಮೇತ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು

ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿದ್ದ ಹಸುಗಳನ್ನು ಪೊಲೀಸರು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದರು

ಅಂಗವಾಡಿ ನೌಕರರು ತಮ್ಮ ಮಕ್ಕಳ ಸಮೇತ ಪ್ರತಿಭಟನೆಯಲ್ಲಿ ಪಾಲ್ಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.