ADVERTISEMENT

ಅಂಗನವಾಡಿಗಳು ಇನ್ನು ‘ಸರ್ಕಾರಿ ಮಾಂಟೆಸ್ಸರಿ’

ಜುಲೈ 22ರಿಂದ ಮಾಂಟೆಸ್ಸರಿಗಳಲ್ಲಿ ಶುರುವಾಗಲಿದೆ ಎಲ್‌ಕೆಜಿ, ಯುಕೆಜಿ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:11 IST
Last Updated 19 ಜುಲೈ 2024, 16:11 IST
‘ಸರ್ಕಾರಿ ಮಾಂಟೆಸ್ಸರಿ’
‘ಸರ್ಕಾರಿ ಮಾಂಟೆಸ್ಸರಿ’   

ಬೆಂಗಳೂರು: ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ/ಯುಕೆಜಿ ಶಿಕ್ಷಣ ನೀಡಲು ನಿರ್ಧರಿಸಿರುವ ಸರ್ಕಾರವು ಈ ಅಂಗನವಾಡಿಗಳಿಗೆ ‘ಸರ್ಕಾರಿ ಮಾಂಟೆಸ್ಸರಿ’ ಎಂದು ಹೊಸ ನಾಮಕರಣ ಮಾಡಲಿದೆ. ಜುಲೈ 22ರಂದು ಮೊದಲ ಹಂತ ಆರಂಭಗೊಳ್ಳಲಿದೆ.

ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಶಿಕ್ಷಣವನ್ನು ತೆರೆಯಲು ನಿರ್ಧರಿಸಿತ್ತು. ಅದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ತೆರೆದರೆ ಅಂಗನವಾಡಿಗಳೇ ಇಲ್ಲವಾಗಿ ಬಿಡುತ್ತವೆ. ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿ ಎಂದು ಒತ್ತಾಯಿಸಿದ್ದವು.

ಸಂಘಟನೆಗಳ ಆಗ್ರಹಕ್ಕೆ ಸ್ಪಂದಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತೆರೆಯಲು ಒಪ್ಪಿಗೆ ನೀಡಿದೆ. ಈ ಅಂಗನವಾಡಿಗಳಿಗೆ ಇನ್ನು ಮುಂದೆ ಸರ್ಕಾರಿ ಮಾಂಟೆಸ್ಸರಿ ಎಂಬ ಹೆಸರು ಇರಲಿದೆ.

ADVERTISEMENT

ರಾಜ್ಯದಲ್ಲಿ 61,876 ಅಂಗನವಾಡಿಗಳಿವೆ. ಅದರಲ್ಲಿ ಉನ್ನತ ಶಿಕ್ಷಣ ಪಡೆದವರು 1,682 ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರಿದ್ದಾರೆ. 6,363 ಅಂಗನವಾಡಿಗಳ ಕಾರ್ಯಕರ್ತೆಯರು ಪದವಿ ಶಿಕ್ಷಣ ಪಡೆದವರು. ಮೊದಲ ಹಂತದಲ್ಲಿ ಈ ಅಂಗನವಾಡಿಗಳಲ್ಲಿ ಎಲ್‌ಕೆಜಿ/ಯುಕೆಜಿ ಶಿಕ್ಷಣ ಆರಂಭಗೊಳ್ಳಲಿದೆ. ಬೆಂಗಳೂರಿನ 250 ‘ಸರ್ಕಾರಿ ಮಾಂಟೆಸ್ಸರಿ’ಗಳಿಗೆ ಜುಲೈ 22ರಂದು ಚಾಲನೆ ದೊರೆಯಲಿದೆ.

ಪಿಯುಸಿ ವಿದ್ಯಾರ್ಹತೆ ಹೊಂದಿರುವ 15,217 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಅಲ್ಲಿ ಎರಡನೇ ಹಂತದಲ್ಲಿ ‘ಸರ್ಕಾರಿ ಮಾಂಟೆಸ್ಸರಿ’ ಆರಂಭಗೊಳ್ಳಲಿದೆ. 38,614 ಅಂಗನವಾಡಿಗಳಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಕಾರ್ಯಕರ್ತೆಯರು ಇದ್ದು, ಈ ಅಂಗನವಾಡಿಗಳು ಮೂರನೇ ಹಂತದಲ್ಲಿ ‘ಸರ್ಕಾರಿ ಮಾಂಟೆಸ್ಸರಿ’ಗಳಾಗಲಿವೆ.

‘ಅಂಗನವಾಡಿ ಎಂದರೆ ಜನರಿಗೆ ಪಾಲನೆ–ಪೋಷಣೆಯ ಕೇಂದ್ರ ಎಂದು ಮನಸ್ಸಲ್ಲಿ ಬರುವುದರಿಂದ ‘ಸರ್ಕಾರಿ ಮಾಂಟೆಸ್ಸರಿ’ ಹೆಸರು ಇಡಲಾಗಿದೆ. ಪ್ರತಿ ‘ಸರ್ಕಾರಿ ಮಾಂಟೆಸ್ಸರಿ’ಗೆ ₹ 3.5 ಲಕ್ಷ ಅನುದಾನ ದೊರೆಯಲಿದ್ದು, ಕಾರ್ಯಕರ್ತೆಯರಿಗೆ ತರಬೇತಿ, ಮಕ್ಕಳಿಗೆ ಸಮವಸ್ತ್ರ, ಶೂ, ಬ್ಯಾಗ್‌ಗಳ ವಿತರಣೆಯಾಗಲಿದೆ. ನಮ್ಮ ಹೋರಾಟದ ಫಲ ಇದು’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌. ವರಲಕ್ಷ್ಮೀ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.