ಬೆಂಗಳೂರು: ಮಹಿಳೆಯರಿಗೆ ನವಚೇತನ ನೀಡಿ, ಸಬಲೀಕರಣಗೊಳಿಸುವ, ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಥಮವಾಗಿ ಜಾರಿಗೆ ತಂದ “ಶಕ್ತಿ” ಯೋಜನೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 47.92 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಮತ್ತು ಅನ್ನ ಭಾಗ್ಯ ಯೋಜನೆಯಡಿ ₹22.8 ಕೋಟಿ ನಗದು ಮೊತ್ತವನ್ನು ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಮಹಿಳೆಯರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಇದುವರೆಗಿನ ಟಿಕೆಟ್ ಮೌಲ್ಯ ಪ್ರಮಾಣ ₹16.27 ಕೋಟಿಯಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಮಂಡ್ಯ ಜಿಲ್ಲೆ ಜನತೆಗೆ ಅನ್ನಭಾಗ್ಯದಡಿ 3,99,965 ಕುಟುಂಬಗಳಿಗೆ ₹22.8 ಕೋಟಿ ನೇರ ನಗದು ವರ್ಗಾವಣೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನ ಇದರ ನೇರ ಫಲಾನುಭವಿಗಳಗಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನ, ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದಾರೆ. ಇದರಿಂದ ಅಲ್ಲಿನ ಆದಾಯದಲ್ಲಿ ಸಹ ಗಣನೀಯವಾಗಿ ಏರಿಕೆಯಾಗಿದೆ. ಅಂದರೆ ಇದು ನಿಜಕ್ಕೂ ಸಂತೋಷದಾಯಕ ವಿಚಾರವಾಗಿದೆ. ಸರ್ಕಾರದ ಒಂದು ಯೋಜನೆಯು ಹತ್ತಾರು ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಾಯ ಮಾಡುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.