ADVERTISEMENT

ಹಸಿವು ಮುಕ್ತ ಭಾರತ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

‘ಅನ್ನಭಾಗ್ಯ ದಶಮಾನೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:58 IST
Last Updated 29 ಫೆಬ್ರುವರಿ 2024, 15:58 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ ಕಾಂಗ್ರೆಸ್‌ ‘ಹಸಿವು ಮುಕ್ತ ಭಾರತ’ವನ್ನು ನಿರ್ಮಿಸಲು ಹೊರಟಿದೆ. ಇದುವೇ ನಮ್ಮ ಸರ್ಕಾರದ ಗುರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ಆಹಾರ ಇಲಾಖೆ ಗುರುವಾರ ಆಯೋಜಿಸಿದ್ದ ಅನ್ನಭಾಗ್ಯ ದಶಮಾನೋತ್ಸವ ಹಾಗೂ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದಿನ ನಮ್ಮ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಕಾರ್ಯಕ್ರಮಗಳೆಲ್ಲವೂ ರಾಜ್ಯವನ್ನು ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಮುಕ್ತವಾಗಿಸುವುದೇ ಆಗಿತ್ತು. ಈಗಿನ ಸರ್ಕಾರದ ಗ್ಯಾರಂಟಿ ಯೋಜನೆಗಳ ಗುರಿ ಕೂಡಾ ಅದೇ ಆಗಿದೆ’ ಎಂದರು.

ADVERTISEMENT

‘ಅನ್ನಭಾಗ್ಯ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ‘ತೂಕ ಮತ್ತು ಅಳತೆ’ ಮಾಪನಗಳ ಕುರಿತು ಮಾಹಿತಿ ನೀಡಿದರು. –ಪ್ರಜಾವಾಣಿ ಚಿತ್ರ

‘ನಾವು ತಲಾ 10 ಕೆ.ಜಿ ಅಕ್ಕಿ ಕೊಡಲು ತೀರ್ಮಾನಿಸಿ, ಪ್ರತಿ ಕೆ.ಜಿಗೆ ₹34ರಂತೆ ಖರೀದಿಸುತ್ತೇವೆ, ಅಕ್ಕಿ ಕೊಡಿ ಎಂದು ಕೇಂದ್ರವನ್ನು ಕೇಳಿದ್ದೆವು. ಅಕ್ಕಿ ದಾಸ್ತಾನಿದ್ದರೂ ಕೊಡಲಿಲ್ಲ. ಬಡವರು, ದುಡಿಯುವವರು, ಶ್ರಮಿಕರು, ದಲಿತರು, ಶೂದ್ರರು ಮತ್ತು ಹಿಂದುಳಿದವರ ಪರವಾಗಿ ಬಿಜೆಪಿಯವರು ಇದ್ದಿದ್ದರೆ ಅಕ್ಕಿ ಕೊಡುತ್ತಿದ್ದರು. ಅಕ್ಕಿ ಕೊಡಲು ನಿರಾಕರಿಸಿದವರರನ್ನು ತಿರಸ್ಕರಿಸಬೇಕು’ ಎಂದು ಅವರು ಕರೆ ನೀಡಿದರು.

ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ, ‘ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಹಕ್ಕಿನಡಿ ಅಕ್ಕಿ ವಿತರಿಸುವ ಯೋಜನೆ ಪ್ರಕಟಿಸಿದರು. ಸಿದ್ದರಾಮಯ್ಯ ಅವರು ಇದೇ ಪರಿಕಲ್ಪನೆಯ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಸಿದ್ದರಾಮಯ್ಯ ಅವರು ಬಡವರು, ದಲಿತರು ಹಿಂದುಳಿದವರ ಪರವಾಗಿ ಸತತವಾಗಿ ಶ್ರಮಿಸುತ್ತಿದ್ದಾರೆ‘ ಎಂದರು.

ಆಹಾರ ನಿಗಮದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ, ‘ದೇವರಾಜ ಅರಸು ಅವರು 1973ರಲ್ಲಿ ಆಹಾರ ನಿಗಮ ಪ್ರಾರಂಭಿಸಿದರು. ಈಗ ನಿಗಮಕ್ಕೆ ಸುವರ್ಣ ಸಂಭ್ರಮ. ಸಿದ್ದರಾಮಯ್ಯ ಅವರ ಹಸಿವು ಮುಕ್ತ ಕರ್ನಾಟಕದ ಆಶಯವನ್ನು ಸಾಕಾರಗೊಳಿಸಲು ಪೂರಕವಾಗಿ ಆಹಾರ ನಿಗಮ ಕಾರ್ಯನಿರ್ವಹಿಸುತ್ತಿದೆ’ ಎಂದರು.

‘ಅನ್ನಭಾಗ್ಯ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು –ಪ್ರಜಾವಾಣಿ ಚಿತ್ರ

ಇದೇ ವೇಳೆ ಗ್ರಾಹಕ ರಕ್ಷಕ ತಪಾಸಣಾ ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್‌ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.