ADVERTISEMENT

ಕಬ್ಬನ್‌ ಪಾರ್ಕ್‌ ಮಾದರಿಯಲ್ಲಿ ಇನ್ನೊಂದು ಸಸ್ಯೋದ್ಯಾನ: ಸಚಿವ ಈಶ್ವರ್‌ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:44 IST
Last Updated 7 ಅಕ್ಟೋಬರ್ 2024, 15:44 IST
<div class="paragraphs"><p>ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಅರಣ್ಯ ಸಚಿವ ಈಶ್ವರ್‌ ಬಿ. ಖಂಡ್ರೆ ಸೋಮವಾರ ಸಪ್ತಾಹದ ಸಮಾರೋಪದಲ್ಲಿ ಬಹುಮಾನ ವಿತರಿಸಿದರು.</p></div>

ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಅರಣ್ಯ ಸಚಿವ ಈಶ್ವರ್‌ ಬಿ. ಖಂಡ್ರೆ ಸೋಮವಾರ ಸಪ್ತಾಹದ ಸಮಾರೋಪದಲ್ಲಿ ಬಹುಮಾನ ವಿತರಿಸಿದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಕಬ್ಬನ್‌ ಪಾರ್ಕ್‌ ಮಾದರಿಯಲ್ಲಿ ಯಲಹಂಕದಲ್ಲಿ 153 ಎಕರೆ ಅರಣ್ಯ ಜಮೀನಿನಲ್ಲಿ ಸಸ್ಯೋದ್ಯಾನ ನಿರ್ಮಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದರು.

ADVERTISEMENT

ಅರಣ್ಯ ಇಲಾಖೆ ಸೋಮವಾರ ಆಯೋಜಿಸಿದ್ದ 70ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ ಬಳಿಯ ಮಾದಪ್ಪನಹಳ್ಳಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನು ಇದಾಗಿದ್ದು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿ ಮುಕ್ತಾಯವಾಗಿರುವುದರಿಂದ ಇಲ್ಲಿ ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ಶೀಘ್ರದಲ್ಲಿಯೇ ಸಸ್ಯೋದ್ಯಾನ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಹೆಸರಿದೆ. ನಗರವು 89 ಚದರ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶ  ಹೊಂದಿದ್ದ ಕಾರಣ ಈ ಹೆಸರು ಬಂದಿತ್ತು. 10 ವರ್ಷಗಳಲ್ಲಿ 5 ಚದರ ಕಿಲೋಮೀಟರ್‌ನಷ್ಟು ಹಸಿರು ಕಡಿಮೆಯಾಗಿದೆ ಎಂಬ ವರದಿ ಇದೆ. ಎಲ್ಲ ಕಡೆ ಸಸಿಗಳನ್ನು ಬೆಳೆಸುವ ಮೂಲಕ ನಗರದಲ್ಲಿ ಹಸಿರು ವನಗಳನ್ನು ಹೆಚ್ಚು ಮಾಡಲಾಗುವುದು. ಜೊತೆಗೆ ರಾಜಧಾನಿಯಲ್ಲಿ ಒತ್ತುವರಿಯಾಗಿರುವ ಅರಣ್ಯ ಜಮೀನುಗಳನ್ನು ಮರಳಿ ಇಲಾಖೆಯ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು.

ಮನುಷ್ಯರಂತೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ. ಅದಕ್ಕೆ ಪೂರಕವಾದ ಪರಿಸರ ಇರಬೇಕಿದ್ದರೆ ಕಾಡು ಉಳಿಯಬೇಕು. ಅರಣ್ಯ ಹೆಚ್ಚಾದರೆ ಮಾತ್ರ ಮಾನವ–ಪ್ರಾಣಿ ಸಂಘರ್ಷವನ್ನು ಕಡಿಮೆಗೊಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್, ಮುಖ್ಯ ವನ್ಯ ಜೀವಿ ಪರಿಪಾಲಕ ಸುಭಾಷ್ ಮಾಲ್ಖಡೆ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮತ್ತು ಅಂಚೆ ಚೀಟಿ ಪ್ರದರ್ಶನ ಏರ್ಪಡಿಸಲಾಗಿತ್ತು. ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.