ADVERTISEMENT

ಬೆಂಗಳೂರು: ಬಿಬಿಎಂಪಿಗೆ ಗುತ್ತಿಗೆದಾರರಿಂದ ಮತ್ತೊಂದು ಗಡುವು

ಬೇಡಿಕೆ ಈಡೇರದಿದ್ದರೆ ಜೂನ್‌ 10ರಿಂದ ನಗರದಾದ್ಯಂತ ಕಾಮಗಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 27 ಮೇ 2024, 16:11 IST
Last Updated 27 ಮೇ 2024, 16:11 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಬಿಬಿಎಂಪಿ ಗುತ್ತಿಗೆದಾರರ ಸಂಘ, ಬಿಬಿಎಂಪಿಗೆ ಮತ್ತೊಂದು ಗಡುವು ನೀಡಿದೆ.  ಮನವಿ ಪರಿಗಣಿಸಿ, ಈಡೇರಿಸದಿದ್ದರೆ ಜೂನ್‌ 10ರಿಂದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಸಿದೆ.

ಬೇಡಿಕೆಗಳನ್ನು ಈಡೇರಿಸುವಂತೆ ಮೇ 6ರಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಸಂಘ ಮನವಿ ಸಲ್ಲಿಸಿತ್ತು. ಬೇಡಿಕೆ ಈಡೇರಿಸದಿದ್ದರೆ ಮೇ 27ರಿಂದ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸಂಘದ ಪದಾಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಮತ್ತಷ್ಟು ಸಮಯ ನೀಡುವಂತೆ ಮನವಿ ಮಾಡಿದ್ದಾರೆ.

ADVERTISEMENT

‘ತುಷಾರ್‌ ಗಿರಿನಾಥ್‌ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ವಾರದ ಸಮಯ ಕೇಳಿದ್ದಾರೆ. ನಮ್ಮ ಒಂಬತ್ತೂ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ನೀಡಿದ್ದಾರೆ. ಹೀಗಾಗಿ, ಅವರಿಗೆ ಸಮಯ ನೀಡಲಾಗಿದೆ. ಜೊತೆಗೆ ಬೇಡಿಕೆ ಈಡೇರಿಸದಿದ್ದರೆ ಜೂನ್‌ 10ರಿಂದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿಯೂ ಅವರಿಗೆ ತಿಳಿಸಿದ್ದೇವೆ’ ಎಂದು  ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ  ಜಿ.ಎಂ. ನಂದಕುಮಾರ್‌ ತಿಳಿಸಿದರು.

ಬೇಡಿಕೆಗಳೇನು?

* 25 ತಿಂಗಳಿಂದ ಬಾಕಿ ಇರುವ 10 ತಿಂಗಳ ಬಿಲ್‌ ಪಾವತಿಸಬೇಕು

* ಬಿಲ್‌ಗಳಲ್ಲಿ ತಡೆಹಿಡಿಯಲಾಗಿರುವ ಶೇ 25ರಷ್ಟನ್ನು ಹಣ ಪಾವತಿಸಬೇಕು

* ಗುಣಮಟ್ಟ ಭರವಸೆ ವಿಭಾಗದ ಮುಖ್ಯ ಎಂಜಿನಿಯರ್‌, ಎಂಜಿನಿಯರ್‌ಗಳ ಕಿರುಕುಳ ತಪ್ಪಿಸಬೇಕು

* ವಲಯ ತಾಂತ್ರಿಕ ಸಲಹೆಗಾರರು ಬಿ.ಆರ್‌ ದಾಖಲಿಸಲು ಪ್ರೀ ಆಡಿಟ್‌ ನಿರ್ವಹಿಸಬೇಕು.

* ವಲಯ ಮುಖ್ಯ ಎಂಜಿನಿಯರ್‌ಗಳ ಬದಲು ಕೇಂದ್ರ ಕಚೇರಿಯಿಂದಲೇ ಬಿಲ್‌ ಪಾವತಿಸಬೇಕು.

* ಟಿವಿಸಿಸಿ ವಿಭಾಗದಿಂದ ರ‍್ಯಾಂಡಮೈಸೇಷನ್‌ ತಪಾಸಣೆಯನ್ನು ಕೈಬಿಡಬೇಕು.

* ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತ್ವರಿತವಾಗಿ ಬಿಲ್‌ ಪಾವತಿ ಮಾಡಬೇಕು.

* ₹50 ಲಕ್ಷದವರೆಗಿನ ಟೆಂಡರ್‌ ಅನುಮೋದನೆ ವಲಯ ಮುಖ್ಯ ಎಂಜಿನಿಯರ್‌ ವ್ಯಾಪ್ತಿಗೆ ನೀಡಬೇಕು

* ಕೆಆರ್‌ಐಡಿಎಲ್‌ ಕಾಮಗಾರಿಗಳನ್ನು ಟಿವಿಸಿಸಿಯಿಂದ ಪರಿಶೀಲಿಸುವ ಆದೇಶ ಕೈಬಿಟ್ಟು, ಬಿಲ್‌ ಪಾವತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.