ADVERTISEMENT

’ಮಕ್ಕಳು ಮಾಡುವುದನ್ನು ನಿಲ್ಲಿಸಿ’; ಹೊಸ ಅಭಿಯಾನ–ಯಾರಿಂದ? ಯಾರಿಗಾಗಿ? ಯಾಕಾಗಿ?

ಚೈಲ್ಡ್‌ಫ್ರೀ ಇಂಡಿಯನ್ಸ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 10:57 IST
Last Updated 6 ಫೆಬ್ರುವರಿ 2019, 10:57 IST
   

ಬೆಂಗಳೂರು: ’ನನ್ನನ್ನ ಯಾಕೆ ಹುಟ್ಟಿಸಿದೆ?!’– ಯೌವನಕ್ಕೆ ಕಾಲಿಟ್ಟಿರುವ ಮಗ ಮತ್ತು ತಂದೆ ನಡುವೆ ಮನೆಯಲ್ಲಿ ಮಾತಿಗೆ ಮಾತು ಬೆಳೆದರೆ, ಒಮ್ಮೆಯಾದರೂ ಮಗನಿಂದ ಇಂಥದ್ದೊಂದು ಸಾಲು ಹೊರಗೆ ಬಂದಿರುತ್ತೆ.ಕೋಪದಲ್ಲಿ ಬರುವ ಅಂಥ ಮಾತಿಗೂ, ದೀರ್ಘ ಸಮಾಲೋಚನೆ ಬೆಳೆಸಿಕೊಂಡಿರುವ ಇಂಥದ್ದೇ ಯೋಚನೆಗೂ ವ್ಯತ್ಯಾಸವಿದೆ. ಮಕ್ಕಳಿಗೆ ಜನ್ಮ ನೀಡುವುದನ್ನು ಪ್ರಶ್ನಿಸಿಕೊಳ್ಳುತ್ತಿರುವ ಕೆಲವು ಒಂದೆಡೆ ಸೇರಿ ಇದನ್ನು ಮತ್ತಷ್ಟು ವಿಸ್ತರಿಸಲು ಕಾರ್ಯಕ್ರಮ ರೂಪಿಸಿಕೊಂಡಿದ್ದಾರೆ.

ಇದೇ ಭಾನುವಾರ(ಫೆ.10) ನಗರದಲ್ಲಿ ’ಮಕ್ಕಳು ಮಾಡುವುದನ್ನು ನಿಲ್ಲಿಸಿ’ ಎಂಬ ಹೆಸರಿನೊಂದಿಗೆ ಮೊದಲ ರಾಷ್ಟ್ರೀಯ ಮಟ್ಟದ ಸಭೆ ಆಯೋಜಿಸಲಾಗುತ್ತಿದೆ.ಮಕ್ಕಳಿಗೆ ಜನ್ಮ ನೀಡುವುದನ್ನು ಪ್ರಶ್ನಿಸುತ್ತಿರುವ ಕೆಲವರು, ಮಗುವನ್ನು ಹುಟ್ಟಿಸಿ ಬದುಕಿನ ಜಂಟಡಗಳಿಗೆ ನೂಕಬೇಡಿ ಎಂದು ಸಾರುತ್ತಿದ್ದಾರೆ. ಮಕ್ಕಳಿರದ ಬದುಕು ನಡೆಸುವ ಯೋಚನೆಗಳನ್ನು ಹೊತ್ತಿರುವ ಅನೇಕರು ಈ ಕಾರ್ಯಕ್ರಮದ ಮೂಲಕ ಒಂದೆಡೆ ಸೇರುತ್ತಿದ್ದಾರೆ.

ಯಾರು ಇವರು?– ಹುಟ್ಟಿನ ಕುರಿತು ವಿರೋಧ ಧೋರಣೆ(ಆ್ಯಂಟಿನಾಟಲಿಸ್ಟ್‌) ಹೊಂದಿರುವವರು. ಇನ್ನೂ ಹೆಚ್ಚು ಮಕ್ಕಳನ್ನು ಭೂಮಿಗೆ ತರಬೇಕಿದೆಯೇ ಎಂದು ಪ್ರಶ್ನಿಸಿಕೊಳ್ಳುತ್ತಿರುವವರು ಹಾಗೂ ತಮ್ಮ ಅಭಿಯಾನದ ಮೂಲಕ ಪ್ರಶ್ನೆಗಳನ್ನು ಜನರ ಮುಂದಿಡುತ್ತಿರುವವರು ಇವರು. ಪ್ರತಿ ಜೀವಿಯ ಹುಟ್ಟು ಪರಿಸರ, ಭೂಮಿಯ ಸಂಪನ್ಮೂಲಗಳಿಗೆ ಹೊರೆ ಎಂದು ಯೋಚಿಸುತ್ತಿರುವವರು.

ADVERTISEMENT

ಯಾರೆಲ್ಲ ಭಾಗವಹಿಸಬಹುದು?– ಬದುಕಿರುವುದೇ ನೋವು ಎಂದು ಭಾವಿಸಿರುವಿರೇ, ಮಗವನ್ನು ಭೂಮಿಯ ಮೇಲೆ ತರದಿರುವುದೇ ಮಗುವನ್ನು ಅನಗತ್ಯ ಸಂಕಟಗಳಿಂದ ಉಳಿಸುವ ಮಾರ್ಗ ಎಂದೆಲ್ಲ ಚಿಂತಿಸುತ್ತಿರುವವರು. ಮಕ್ಕಳೇ ಇರದ ಬದುಕು ಜೀವಿಸಲು ಮನಸು ಮಾಡಿರುವವರು, ಇಂಥ ಎಲ್ಲ ಪ್ರಶ್ನೆಗಳನ್ನು ಮರೆತು ಮುಂದೆ ಸಾಗುತ್ತಿರುವವರು; ಈ ಎಲ್ಲ ಪ್ರಶ್ನೆಗಳನ್ನು ನಿಮ್ಮಲ್ಲೂ ಇಟ್ಟುಕೊಂಡಿರುವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.

ಸಂತಾನೋತ್ಪತ್ತಿ ನಡೆಸದಿರುವ ತೀರ್ಮಾನಿಸಿರುವ ಅನೇಕರು ತಂಡವಾಗಿದ್ದು,’ಚೈಲ್ಡ್‌ಫ್ರೀ ಇಂಡಿಯನ್ಸ್‌’ ಎಂದು ಕರೆದುಕೊಂಡಿದ್ದಾರೆ. ಮಕ್ಕಳಿರದೆ ಬದುಕು ಮುಂದುವರಿಸುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಕಾರ್ಯಕ್ರಮದ ಸ್ಥಳ: ದಿ ಗ್ರೀನ್‌ ಪಾತ್‌, ಮಂತ್ರಿ ಸ್ಕೇರ್‌ ಎದುರು, ಬೆಂಗಳೂರು

ಪ್ರವೇಶ ಶುಲ್ಕ: ₹200 (ಶುಲ್ಕ ನೀಡಿ ಬರಲಾಗದವರಿಗೆ ವಿನಾಯಿತಿಯೂ ಇದೆ)

ದಿನಾಂಕ: ಫೆಬ್ರುವರಿ 10

(ಹೆಚ್ಚಿನ ಮಾಹಿತಿಯನ್ನು ಚೈಲ್ಡ್‌ ಫ್ರೀ ಫೇಸ್‌ಬುಕ್‌ ಪುಟದಿಂದ ಪಡೆಯಬಹುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.