ಯಲಹಂಕ: ಕೆಬಿಜಿ ಸ್ವಯಂಸೇವಕರ ತಂಡದ ವತಿಯಿಂದ ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಬ್ಯಾಟರಾಯನಪುರದಲ್ಲಿ ಅಂತರ ಅಪಾರ್ಟ್‌ಮೆಂಟ್ ಕ್ರೀಡಾ ಉತ್ಸವವನ್ನು ಏರ್ಪಡಿಸಲಾಗಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಮಾರು 400 ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಈ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರಣ್ಯಪುರದಲ್ಲಿರುವ ಒಳಾಂಗಣ ಕ್ರೀಡಾಂಗಣ, ಕೆಂಪಾಪುರದಲ್ಲಿ ನೂತನವಾಗಿ ಆರಂಭವಾಗಿರುವ ಒಳಾಂಗಣ ಕ್ರೀಡಾಂಗಣ ಸೇರಿ ವಿವಿಧ ಮೈದಾನಗಳಲ್ಲಿ ಕ್ರೀಡೆಗಳು ನಡೆಯಲಿವೆ.
ಸುಮಾರು 2,500 ಮಂದಿ ಅಪಾರ್ಟ್‌ಮೆಂಟ್ ನಿವಾಸಿಗಳು, ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು, ಫುಟ್‌ಬಾಲ್, ಬ್ಯಾಸ್ಕೆಟ್ ಬಾಲ್, ಕೇರಂ, ಹಗ್ಗ ಜಗ್ಗಾಟ ಮತ್ತಿತರ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತೆ, ಕಂದಾಯ ಸಚಿವರ ಪತ್ನಿ ಮೀನಾಕ್ಷಿ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸುತ್ತಮುತ್ತಲ ಜನರ ಜೊತೆಗೆ ಸಂಪರ್ಕ ಕಡಿಮೆಯಿರುತ್ತದೆ. ಅವರೂ ಸ್ಥಳೀಯ ಜನರೊಂದಿಗೆ ಬೆರೆತು ಪರಿಚಯವಾಗಬೇಕು. ಕೇತ್ರದ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಲಭ್ಯವಿರುವ ಕ್ರೀಡಾಂಗಣಗಳ ಸದುಪಯೋಗ ಪಡೆದುಕೊಂಡು, ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಎರಡನೇ ಬಾರಿಗೆ ಕ್ರೀಡಾ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.