ADVERTISEMENT

ಮನೆಗಳ ತೆರವಿಗೆ ಮುಂದಾದ ಎಪಿಎಂಸಿ ಅಧಿಕಾರಿಗಳು: ದಲಿತರಿಂದ ಪ್ರತಿರೋಧ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:31 IST
Last Updated 10 ನವೆಂಬರ್ 2021, 19:31 IST
ಮನೆಗಳ ತೆರವಿಗೆ ಕಾರ್ಯಚರಣೆ
ಮನೆಗಳ ತೆರವಿಗೆ ಕಾರ್ಯಚರಣೆ   

ದಾಬಸ್ ಪೇಟೆ: ಸರ್ಕಾರ ತಮಗೆ ಮೀಸಲಿರಿಸಿರುವ ಜಾಗದಲ್ಲಿನ ಮನೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಮಂಗಳವಾರದಂದು ಜೆಸಿಬಿ ಮೂಲಕ ತೆರವಿಗೆ ಮುಂದಾದಾಗ, ಸ್ಥಳೀಯರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ, ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಎಡೆಹಳ್ಳಿ ಗ್ರಾಮದ ಸರ್ವೆ ನಂಬರ್ 61ರ ಸರ್ಕಾರಿ ಜಮೀನಿನಲ್ಲಿ 'ಕೃಷಿ ಉತ್ಪನ್ನ ಮಾರುಕಟ್ಟೆ ಕಟ್ಟಡ ಮತ್ತು ಪ್ರಾಂಗಣ' ನಿರ್ಮಾಣ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 6 ಎಕರೆ 10 ಗುಂಟೆ ಜಾಗ ಮಂಜೂರು ಮಾಡಲಾಗಿದೆ. ಆದರೆ, ಅದೇ ಸರ್ವೆ ನಂಬರ್ ಜಾಗದಲ್ಲಿ ಸುಮಾರು 80ಕ್ಕೂ ಹೆಚ್ಚು ದಲಿತ ಹಾಗೂ ಬಡ ಕುಟುಂಬಗಳು ಮನೆ ನಿರ್ಮಾಣ ಮಾಡಿಕೊಂಡು ಮೂವತ್ತು ವರ್ಷಗಳಿಂದ ವಾಸಿಸುತ್ತಿವೆ. ಅದರಲ್ಲಿ 40 ಕುಟುಂಬಗಳಿಗೆ ಸರ್ಕಾರದಿಂದ ಹಕ್ಕುಪತ್ರ ವಿತರಿಸಲಾಗಿದೆ. 40 ಕುಟುಂಬಗಳು ಇಲ್ಲಿಯೇ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದು, ತಹಶೀಲ್ದಾರ್ ಕಚೇರಿಗೆ ಆಶ್ರಯ ಯೋಜನೆಯ ನಿಯಮ '94 ಸಿ' ಅಡಿ ಹಕ್ಕು ಪತ್ರ ನೀಡಲು ಅರ್ಜಿ ಸಲ್ಲಿಸಿವೆ.

ಈ ನಡುವೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಜೆಸಿಬಿ ಮೂಲಕ ಮನೆಗಳ ತೆರವಿಗೆ ಮುಂದಾದಾಗ, ಸ್ಥಳೀಯರು ಅದಕ್ಕೆ ಪ್ರತಿರೋಧ ತೋರಿಸಿದರು.

ADVERTISEMENT

ಸ್ಥಳಕ್ಕೆ ಬಂದ ನೆಲಮಂಗಲ ತಹಶೀಲ್ದಾರ್ ಕೆ. ಮಂಜುನಾಥ್ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಜಮೀನಿನ ಸರ್ವೇ ಕಾರ್ಯ ನಡೆಸಿ, ಎಪಿಎಂಸಿಗೆ ಮೀಸಲಾದ ಜಾಗ ಹೊರತುಪಡಿಸಿ, ಉಳಿಕೆ ಜಾಗದಲ್ಲಿ ಇಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ದಲಿತರು ಹಾಗೂ ನಿರಾಶ್ರಿತರಿಗೆ ಅನುಕೂಲವಾಗುವಂತೆ ನಿವೇಶನಗಳ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

'ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜಾಗ ಗುರುತಿಸಲು ಬಂದಾಗಲೇ, ಈ ಗೋಮಾಳವನ್ನು ವಸತಿ ಉದ್ದೇಶಕ್ಕೆ ಮೀಸಲಿಡುವಂತೆ ಮನವಿ ಮಾಡಿದ್ದೆವು. ಸೋಂಪುರ ಹೋಬಳಿ ಎಪಿಎಂಸಿ ನಿರ್ದೇಶಕ ಗಂಗಣ್ಣ ಅವರ ಮಾತು ಕೇಳಿ, ನಮಗೆ ಈ ಪರಿಸ್ಥಿತಿ ಬಂದಿದೆ. ಈ ಜಾಗ ಬಿಟ್ಟರೆ ನಮಗೆ ಬದಲಿ ಜಾಗವಿಲ್ಲ. ಹಾಗೊಮ್ಮೆ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ‘ ಎಂದರು ಸ್ಥಳೀಯ ದಲಿತ ಮುಖಂಡ ಕಾಂತರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.