ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ: ಹಮಾಲಿ, ಕಾರ್ಮಿಕರ ಪ್ರತಿಭಟನೆ

ಕಾರ್ಮಿಕರ ನಿಗಮ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 19:18 IST
Last Updated 21 ಡಿಸೆಂಬರ್ 2020, 19:18 IST
ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿ ಹಮಾಲಿಗಳು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿ ಹಮಾಲಿಗಳು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಪಿಎಂಸಿ ಕಾಯ್ದೆತಿದ್ದುಪಡಿ ವಿರೋಧಿಸಿ ಹಾಗೂ ಎಪಿಎಂಸಿ ಕಾರ್ಮಿಕ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಎಪಿಎಂಸಿ ಯಾರ್ಡ್‌ಗಳ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿ ಹಮಾಲಿಗಳು, ಕಾರ್ಮಿಕರು ಪ್ರತಿಭಟಿಸಿದರು.

ಎಪಿಎಂಸಿ ಮಂಡಿ ಹಮಾಲಿ ಕಾರ್ಮಿಕರ ಸಂಘ, ಎಪಿಎಂಸಿ ಲೋಡಿಂಗ್‌, ಅನ್‌ ಲೋಡಿಂಗ್ ಮತ್ತು ಜನರಲ್ ವರ್ಕರ್ಸ್‌ ಯೂನಿಯನ್‌, ಮಹಿಳಾ ಹಮಾಲಿ ಕಾರ್ಮಿಕರ ಸಂಘ ಹಾಗೂ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ ಸಂಘಟನೆಗಳು ಸೋಮವಾರ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ್ದವು.

ಪ್ರತಿಭಟನೆ ಅಂಗವಾಗಿ ಪ್ರಾಂಗಣದಲ್ಲಿ ಕೆಲಸ ಮಾಡುವ ಹಮಾಲಿಗಳು ಹಾಗೂ ಕಾರ್ಮಿಕರು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಮ್ಮ ಕೆಲಸಗಳನ್ನು ಬಹಿಷ್ಕರಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದರು.

ADVERTISEMENT

‘ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು. ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪ್ರಾಂಗಣದ ಹಮಾಲಿಗಳು ಹಾಗೂ ಕಾರ್ಮಿಕರು ಜತೆಗೂಡಿದ್ದೇವೆ’ ಎಂದುಅಖಿಲ ಕರ್ನಾಟಕ ಎಪಿಎಂಸಿ ಯಾರ್ಡ್‌ಗಳ ಕಾರ್ಮಿಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಪರಮೇಶ್‌ ತಿಳಿಸಿದರು.

‘ಹಮಾಲಿಗಳು ಹಾಗೂ ಕಾರ್ಮಿಕರಅಭಿವೃದ್ಧಿಗಾಗಿ ‘ಎಪಿಎಂಸಿ ಕಾರ್ಮಿಕರ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು. ಅಸಂಘಟಿತರಾಗಿರುವ ಇವರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಬೇಕು. ಕಾರ್ಮಿಕ ಇಲಾಖೆಯಿಂದ ಎಲ್ಲ ರೀತಿಯ ಸವಲತ್ತುಗಳು ಸಿಗಬೇಕು. ಪ್ರಾಂಗಣಗಳಲ್ಲಿ ಆಸ್ಪತ್ರೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಬೇಡಿಕೆಗಳ ಬಗ್ಗೆ ಗಮನಸೆಳೆದು ಹಮಾಲಿ, ಕಾರ್ಮಿಕರು ಕಾಲ್ನಡಿಗೆ ಜಾಥಾದಲ್ಲಿ ತೆರಳಿ, ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಡಿ.28ರವರೆಗೆ ಸಮಯ ನೀಡಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಎಲ್ಲ ಕೆಲಸಗಳನ್ನು ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ’ ಎಂದೂ ಎಚ್ಚರಿಸಿದರು.

‌ಎಪಿಎಂಸಿ ಸೆಸ್‌ ಹೆಚ್ಚಳ ವಿರೋಧಿಸಿ ರಾಜ್ಯದ ಎಪಿಎಂಸಿಗಳಲ್ಲಿ ಸಾಂಕೇತಿಕವಾಗಿ ಸೋಮವಾರ ಬಂದ್‌ ನಡೆಯಿತು. ಆದರೆ, ಯಶವಂತಪುರ ಎಪಿಎಂಸಿ ವರ್ತಕರು ಬಂದ್ ನಡೆಸಲಿಲ್ಲ. ಪ್ರಾಂಗಣದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.

ನಾಳೆ ವರ್ತಕರ ‌ಪ್ರತಿನಿಧಿಗಳ ಸಭೆ
ಎಪಿಎಂಸಿ ಸೆಸ್‌ ದರ ಶೇ 0.35ರಿಂದ ಶೇ 1ಕ್ಕೆ ಹೆಚ್ಚಿಸಿರುವುದಕ್ಕೆ ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸೆಸ್‌ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲು ಡಿ.23 ರಂದುಎಪಿಎಂಸಿ ವರ್ತಕರ ಪ್ರತಿನಿಧಿಗಳ ಸಭೆಯನ್ನುಎಫ್‌ಕೆಸಿಸಿಐನಲ್ಲಿ ಹಮ್ಮಿಕೊಂಡಿದ್ದಾರೆ.

‘ಸೆಸ್‌ ಹೆಚ್ಚಳ ವಿರೋಧಿಸಿ ರಾಜ್ಯದ ವಿವಿಧ ಎಪಿಎಂಸಿ ಪ್ರಾಂಗಣಗಳಲ್ಲಿ ವರ್ತಕರು ಬಂದ್‌ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರಿಗೆ ಮನವಿ ಮಾಡಿದ್ದೇವೆ. ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು, ಸೆಸ್‌ ಕಡಿಮೆ ಮಾಡುವ ಬೇಡಿಕೆ ಯನ್ನು ಸರ್ಕಾರದ ಮುಂದಿಡುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಎಪಿಎಂಸಿಗಳನ್ನು ಅನಿರ್ದಿಷ್ಟಾವಧಿ ಬಂದ್‌ ಮಾಡಲಿದ್ದೇವೆ’ ಎಂದು ಬೆಂಗಳೂರು ಎಪಿಎಂಸಿ ಒಕ್ಕೂಟದ ಅಧ್ಯಕ್ಷ ರಮೇಶ್‌ ಚಂದ್ರ ಲಾಹೋಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಪಿಎಂಸಿ ಬಂದ್:ವಿವಿಧೆಡೆಧರಣಿ
ಹುಬ್ಬಳ್ಳಿ/ರಾಯಚೂರು: ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ವಹಿವಾಟಿನ ಮೇಲೆ ವಿಧಿಸುವಸೆಸ್‌ ಅನ್ನು 35 ಪೈಸೆಯಿಂದ ₹1ಕ್ಕೆ ಏರಿಸಿರುವುದನ್ನು ವಿರೋಧಿಸಿ ರಾಜ್ಯದ ವಿವಿಧೆಡೆ ಎಪಿಎಂಸಿಗಳಲ್ಲಿ ಸೋಮವಾರ ಧರಣಿ ನಡೆಯಿತು.

ಧರಣಿಯಲ್ಲಿ ವಿವಿಧ ರೈತ ಸಂಘಟನೆಗಳು, ಸ್ಥಳೀಯ ವ್ಯಾಪಾರಿ ಸಂಘಟನೆ ಗಳು, ಹಮಾಲರು ಭಾಗವಹಿಸಿದ್ದರು.

ಹುಬ್ಬಳ್ಳಿ ಎಪಿಎಂಸಿ ಪೂರ್ಣ ಬಂದ್‌ ಆಗಿತ್ತು. ಶಿರಸಿಯಲ್ಲಿ ವಹಿವಾಟು ಎಂದಿನಂತೆ ನಡೆಯಿತು. ಕುಮಟಾ ಎಪಿಎಂಸಿಯಲ್ಲಿ ವ್ಯವಹಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಮರ್ಚಂಟ್ಸ್‌ ಅಸೋಸಿಯೇಷನ್‌ ವಹಿವಾಟು ಬಂದ್‌ ಮಾಡಿ‌ ಸಾಂಕೇತಿಕ ಧರಣಿ ನಡೆಸಿತು. ಅಖಿಲ ಕರ್ನಾಟಕ ಎಪಿಎಂಸಿ ಯಾರ್ಡ್‌ಗಳ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಹಮಾಲಿಗಳು, ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಎಪಿಎಂಸಿಯ ವರ್ತಕರು, ಆಹಾರ ಧಾನ್ಯ ವರ್ತಕರ ಕ್ಷೇಮಾಭಿವೃದ್ಧಿ ಸಂಘದವರು ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಬಂದ್ ಮಾಡಿದ್ದರು.

ರಾಯಚೂರು ಜಿಲ್ಲೆಯಲ್ಲಿ ಎಪಿಎಂಸಿ ವರ್ತಕರು 5 ದಿನಗಳಿಂದ ಬಂದ್‌ ನಡೆಸುತ್ತಿದ್ದು, ಹತ್ತಿ ಮಿಲ್‌ಗಳ ಮಾಲೀಕರೂ ಬೆಂಬಲ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.