ಬೆಂಗಳೂರು: ಕೋವಿಡ್–19 ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅಪೊಲೊ ಸಮೂಹ ಆಸ್ಪತ್ರೆಗಳು ಸನ್ನದ್ಧವಾಗಿದ್ದು,ಪ್ರತಿ ದಿನ 10 ಲಕ್ಷ ಕೋವಿಡ್ ಲಸಿಕೆ ನಿರ್ವಹಿಸಲು ಸಮರ್ಥರಾಗಿದ್ದೇವೆ
ಎಂದು ‘ಅಪೊಲೊ ಹಾಸ್ಪಿಟಲ್ಸ್’ ಹೇಳಿಕೊಂಡಿದೆ.
‘ಪ್ರತಿ ವರ್ಷ 30 ಕೋಟಿ ಡೋಸ್‌ಗಳನ್ನು ನಿರ್ವಹಿಸಲು ಅಗತ್ಯ ಪ್ರಮಾಣದ ಶೈತ್ಯಾಗಾರ ಸೌಲಭ್ಯವನ್ನು ಹೊಂದಿದ್ದೇವೆ. ಲಸಿಕೆಗೆ ಸಂಬಂಧಿಸಿದ ನಿಯಮಗಳನ್ನು ಸುರಕ್ಷಿತ ರೂಪದಲ್ಲಿ ಪಾಲಿಸಲು ಅಪೊಲೊದ 10 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗುವುದು’ ಎಂದು ಅದು ಹೇಳಿದೆ.
ದೇಶದಾದ್ಯಂತ ಔಷಧ ಪೂರೈಕೆಗೆ ಇರುವ 19 ಕೇಂದ್ರಗಳನ್ನು ಪೂರ್ಣಪ್ರಮಾಣದಲ್ಲಿ ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಅಪೊಲೊದ 70 ಆಸ್ಪತ್ರೆಗಳು, 400ಕ್ಕೂ ಹೆಚ್ಚು ಕ್ಲಿನಿಕ್‌ಗಳು, 500 ಕಾರ್ಪೊರೇಟ್ ಆರೋಗ್ಯಕೇಂದ್ರಗಳು, 4 ಸಾವಿರ ಔಷಧಾಲಯಗಳು, ಅಪೊಲೊ 24X7 ಡಿಜಿಟಲ್ ಮಾರಾಟ ತಾಣದ ಮೂಲಕ ಕೋವಿಡ್ ಲಸಿಕೆಯ ಸಮರ್ಥ ನಿರ್ವಹಣೆಯನ್ನು ಮಾಡಲಿದ್ದೇವೆ ಎಂದು ಕಂಪನಿ ತಿಳಿಸಿದೆ.
‘ಲಸಿಕೆಯ ತಯಾರಿಕೆಯನ್ನು ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ. ಲಸಿಕೆ ಅಭಿವೃದ್ಧಿ ಪಡಿಸಿದ ಕೂಡಲೇ ಅದನ್ನು ಹೆಚ್ಚು ದಕ್ಷವಾಗಿ ನಿರ್ವಹಿಸಲು ಅಪೊಲೊ ಸರ್ವ ಸನ್ನದ್ಧವಾಗಿದೆ’ ಎಂದು ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶೋಭನಾ ಕಮಿನೇನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.