ADVERTISEMENT

ಕ್ಯಾನ್ಸರ್ ಲಸಿಕೆಗೆ ಕೇಂದ್ರಕ್ಕೆ ಮನವಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ *ಎಐ ಆಧಾರಿತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 14:09 IST
Last Updated 19 ಜನವರಿ 2024, 14:09 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ‘ಕ್ಯಾನ್ಸರ್ ನಿಯಂತ್ರಣಕ್ಕೆ ತಪಾಸಣೆ ಹಾಗೂ ಲಸಿಕೆ ಸಹಕಾರಿ. ಆದ್ದರಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ‘ಎಚ್‌ಪಿವಿ ಲಸಿಕೆ’ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಅಪೋಲೊ ಆಸ್ಪತ್ರೆಗಳ ಸಮೂಹವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದೇಶದ ಪ್ರಥಮ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಗಂಥಿ ವಿಜ್ಞಾನ ಕೇಂದ್ರವನ್ನು (ಎಐ–ಡ್ರಿವನ್ ಪ್ರಿಸಿಶನ್ ಆಂಕಾಲಜಿ ಸೆಂಟರ್) ಉದ್ಘಾಟಿಸಿ ಅವರು ಮಾತನಾಡಿದರು. 

‘ಬದಲಾದ ಜೀವನ ವಿಧಾನ, ಪಾಶ್ಚಾತ್ಯ ಆಹಾರ ಪದ್ಧತಿ, ವಾಯುಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್, ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಸುಲಭವಾಗಿ ಕಾಯಿಲೆಯನ್ನು ವಾಸಿ ಮಾಡಬಹುದು. ಆದ್ದರಿಂದ ಈ ಬಗ್ಗೆ ಕ್ರಮವಹಿಸಲಾಗಿದೆ. ಕ್ಯಾನ್ಸರ್ ಲಸಿಕೆ ದುಬಾರಿ ಆಗಿರುವುದರಿಂದ ಎಲ್ಲರಿಗೂ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು. 

ADVERTISEMENT

‘ವ್ಯಕ್ತಿಯನ್ನು ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಕುಗ್ಗಿಸುತ್ತಿದ್ದ ಕ್ಯಾನ್ಸರ್ ಕಾಯಿಲೆ ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಕಾಯಿಲೆ ಬಗ್ಗೆ ಜಾಗೃತಿಯೂ ಮೂಡುತ್ತಿದ್ದು, ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆಗಳು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುತ್ತಿವೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ನಿಖರ ಚಿಕಿತ್ಸೆಗೆ ಸಹಕಾರಿಯಾಗುತ್ತಿವೆ. ಕಡಿಮೆ ಖರ್ಚಿನಲ್ಲಿ ನಿಖರ ಚಿಕಿತ್ಸೆ ಎಲ್ಲರಿಗೂ ಸಿಗಬೇಕೆನ್ನುವುದು ನಮ್ಮ ಆದ್ಯತೆ’ ಎಂದು ತಿಳಿಸಿದರು. 

ಅಪೋಲೊ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸುನೀತಾ ರೆಡ್ಡಿ, ‘ಕ್ಯಾನ್ಸರ್ ಪೀಡಿತರಲ್ಲಿ ಹಲವರು ಆತ್ಮವಿಶ್ವಾಸ ಕಳೆದುಕೊಂಡು, ತಮ್ಮ ಜೀವನ ಅಂತ್ಯವಾಯಿತು ಅಂದುಕೊಳ್ಳುತ್ತಾರೆ. ಆದ್ದರಿಂದ ಕ್ಯಾನ್ಸರ್ ಕಾಯಿಲೆ ಬಗ್ಗೆ ಜನರಲ್ಲಿನ ಭಯವನ್ನು ಹೋಗಲಾಡಿಸಬೇಕಿದೆ. ನಿಖರ ಚಿಕಿತ್ಸೆ ಹಾಗೂ ಶೀಘ್ರ ಚೇತರಿಕೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಈ ಕೇಂದ್ರ ಸಹಕಾರಿಯಾಗಲಿದೆ. ಈ ಕೇಂದ್ರವು ಹೊಸ ರೋಗಿಗಳನ್ನು ಗುರುತಿಸಲು, ಕ್ಯಾನ್ಸರ್ ಪೀಡಿತರ ಆರೋಗ್ಯದ ಮೇಲೆ ನಿಗಾ ಇಡಲು ಕೂಡ ನೆರವಾಗಲಿದೆ’ ಎಂದು ವಿವರಿಸಿದರು. 

ಅಪೋಲೊ ಕ್ಯಾನ್ಸರ್ ಸೆಂಟರ್‌ನ ವೈದ್ಯಕೀಯ ಗಂಥಿ ವಿಜ್ಞಾನದ ಮುಖ್ಯಸ್ಥ ಡಾ. ವಿಜಯ್ ಅಗರ್ವಾಲ್, ಹಿರಿಯ ಸಲಹೆಗಾರ ಡಾ. ವಿಶ್ವನಾಥ್ ಎಸ್. ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.