ಬೆಂಗಳೂರು: ಉದ್ಯಮಿ ಲೋಕನಾಥ್ ಅವರ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ನಲಪಾಡ್‌ಗೆ ಮತ್ತೆ ಚಾಟಿ ಬೀಸಿರುವ ಹೈಕೋರ್ಟ್ ‘ಮಾಡಿರುವ ಪಾಪ ಎಲ್ಲಿಗೆ ಹೋದರೂ ಕಳೆಯೋದಿಲ್ಲ’ ಎಂದು ಕುಟುಕಿದೆ.
‘ನಾನು ಮೆಕ್ಕಾಗೆ ಹೋಗಬೇಕು. ಆದ್ದರಿಂದ, ನನ್ನ ಜಾಮೀನು ಷರತ್ತುಗಳನ್ನು ಸಡಿಲಿಸಬೇಕು’ ಎಂದು ಕೋರಿ ಮೊಹಮದ್ ನಲಪಾಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನಲಪಾಡ್ ಪರ ವಕೀಲರು, ‘ಅರ್ಜಿದಾರರು ಮೆಕ್ಕಾಗೆ ತೆರಳಬೇಕಿರುವ ಕಾರಣ 20 ದಿನಗಳ ಕಾಲ ಜಾಮೀನು ಷರತ್ತು ಸಡಿಲಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ನಟರಾಜನ್, ‘ಅರ್ಜಿದಾರರ ಮೇಲೆ ಏನೇನು ಆರೋಪಗಳಿವೆ’ ಎಂದು ಪ್ರಶ್ನಿಸಿದರಲ್ಲದೆ, ದಾಖಲೆಗಳನ್ನು ಪರಿಶೀಲಿಸಿ, ‘ಮಾಡಿದ ಪಾಪ ಎಲ್ಲಿಗೆ ಹೋದ್ರೂ ಕಳೆಯೋದಿಲ್ಲ’ ಎಂದರು.
‘ಈ ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ವಿವರಣೆ ನೀಡಲಿ. ಆಮೇಲೆ ನೋಡೋಣ’ ಎಂದು ಉತ್ತರಿಸಿ ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.