ಬೆಂಗಳೂರು: ‘ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಜಲಾನಯನಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ಹಾಗೂ ನಿಬಂಧನೆಗಳನ್ನು ರೂಪಿಸಲು ಪ್ರತ್ಯೇಕ ಉಸ್ತುವಾರಿ ಸಂಸ್ಥೆಯನ್ನು ರೂಪಿಸಬೇಕು’
ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದ ಸಮಗ್ರ ಅಧ್ಯಯನ ನಡೆಸಿದ್ದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) 2015ರಲ್ಲಿ ನೀಡಿದ್ದ ವರದಿಯಲ್ಲಿ ಮಾಡಿದ್ದ ಪ್ರಮುಖ ಶಿಫಾರಸು ಇದು. ಈ ಪ್ರಸ್ತಾವ ನನೆಗುದಿಗೆ ಬಿದ್ದಿದೆ.
ಜಲಾನಯನ ಪ್ರದೇಶದಲ್ಲಿ ಅಭಿವೃದ್ಧಿ ಹಾಗೂ ನಿಯಂತ್ರಣದ ಹೊಣೆ ಹೊತ್ತ ವಿವಿಧ ಇಲಾಖೆಗಳ ನಡುವೆ ಸಮನ್ವಯವೇ ಇಲ್ಲ ಎಂಬುದನ್ನು ಎಂಪ್ರಿ ತನ್ನ ವರದಿಯಲ್ಲೂ ಬೊಟ್ಟು ಮಾಡಿತ್ತು. ಈ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿದ ಬಹು ಆಯಾಮಗಳ ಸಮಗ್ರ ವಿಶ್ಲೇಷಣೆ, ನಿರ್ವಹಣೆ, ಹಾಗೂ ನಿಯಂತ್ರಣ ಚಟುವಟಿಕೆಗಳನ್ನು ಒಳಗೊಂಡ ಸಾಂಸ್ಥಿಕ ನಿರ್ವಹಣೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿತ್ತು.
ಮಸೂದೆ ಮೂಲೆಗುಂಪು: ನಗರಾಭಿವೃದ್ಧಿ ಇಲಾಖೆಯು ‘ಕರ್ನಾಟಕ ಅರ್ಕಾವತಿ ಮತ್ತು ಕುಮುದ್ವತಿ ನದಿ ಜಲಾನಯನ ಸಂರಕ್ಷಣೆ ಮತ್ತು ಅಭಿವೃದ್ಧಿ ಮಸೂದೆ’ಯನ್ನು 2013ರಲ್ಲಿ ರೂಪಿಸಿತ್ತು. ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರೂಪಿಸುವ ಉದ್ದೇಶವನ್ನು ಈ ಮಸೂದೆ ಹೊಂದಿತ್ತು.
ಜಲಾನಯನ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಅಧಿಕಾರವನ್ನು ಈ ಪ್ರಾಧಿಕಾರಕ್ಕೆ ನೀಡುವ ಪ್ರಸ್ತಾವ ಮಸೂದೆಯಲ್ಲಿತ್ತು. ಮಣ್ಣಿನ ಸವಕಳಿ ತಡೆ, ನೀರು ಹರಿವಿಗೆ ಇರುವ ಅಡ್ಡಿ ನಿವಾರಣೆ, ಮಾಲಿನ್ಯ ನಿಯಂತ್ರಿಸುವುದು, ಈ ನದಿಗಳಲ್ಲಿ ಪರಿಸರ ವ್ಯವಸ್ಥೆ ಉಳಿಸಿಕೊಳ್ಳುವಷ್ಟಾದರೂ ನೀರಿನ ಹರಿವಿರುವಂತೆ ನೋಡಿಕೊಳ್ಳುವುದು, ನದಿಗಳ ಸಂರಕ್ಷಣೆ ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಹೊಣೆಯನ್ನು ಪ್ರಾಧಿಕಾರಕ್ಕೆ ನೀಡುವ ಪ್ರಸ್ತಾವವಿತ್ತು. ಹಣಕಾಸು ಇಲಾಖೆ ಈ ಬಗ್ಗೆ ಕೆಲವು ಸ್ಪಷ್ಟೀಕರಣ ಕೋರಿತ್ತು. ಆ ಬಳಿಕ ಪ್ರಾಧಿಕಾರವನ್ನು ರೂಪಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ.
‘ಈ ನದಿಗಳ ಜಲಾನಯನ ಪ್ರದೇಶದ ಚಟುವಟಿಕೆ ಮೇಲೆ ನಿಗಾ ಇಡಲು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾದರಿಯ ಸಂಸ್ಥೆಯನ್ನು ರಚಿಸುವ ಅಗತ್ಯವಿದೆ. ಈ ಪ್ರದೇಶದಲ್ಲಿ ನಡೆಯುವ ಮರಳುಗಾರಿಕೆ, ಕೃಷಿ, ನೀರಿನ ಹರಿವು, ಹಸಿರಿನ ನಾಶ ಮತ್ತಿತರ ಚಟುವಟಿಕೆಗಳ ಮೇಲೆ ಅದು ನಿತ್ಯವೂ ನಿಗಾ ವಹಿಸಿ ಕ್ರಮಕೈಗೊಳ್ಳುವಂತಾಗಬೇಕು’ ಎಂದು ಸಲಹೆ ನೀಡುತ್ತಾರೆ ಜಲತಜ್ಞ ಎಸ್.ವಿಶ್ವನಾಥ್
‘ನಗರಕ್ಕೆ ಶರಾವತಿಯಿಂದ ನೀರು ತರುವುದಕ್ಕೆ ಡಿಪಿಆರ್ ರಚಿಸುವ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಆದರೆ, ನಮ್ಮ ನಗರದ ಹಿತ್ತಲಿನಲ್ಲೇ ಇರುವ ನದಿಗಳನ್ನು ಉಳಿಸಿಕೊಳ್ಳಲು ಪ್ರತ್ಯೇಕ ಸಂಸ್ಥೆಯನ್ನು ರಚಿಸುವುದು ಅದಕ್ಕಿಂತ ತುರ್ತಿನ ವಿಷಯ ಎಂದು ಸರ್ಕಾರಕ್ಕೆ ಅನಿಸುವುದೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅರ್ಕಾವತಿ ನದಿ ಪುನರುಜ್ಜೀವನ ಆಂದೋಲನದಲ್ಲಿ ಸಕ್ರಿಯರಾಗಿದ್ದ ಜನಾರ್ದನ ಕೆಸರಗದ್ದೆ.
ಭೂಬಳಕೆ: ದಶಕದಲ್ಲಿ ಭಾರಿ ಮಾರ್ಪಾಡು
ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದ ಸಂರಕ್ಷಣೆಗೆ ಸಂಬಂಧಿಸಿದಂತೆ ಅರಣ್ಯ ಮತ್ತು ಪರಿಸರ ಇಲಾಖೆ 2003ರಲ್ಲಿ ಅಧಿಸೂಚನೆ ಹೊರಡಿಸಿದ ನಂತರವೂ ಇದರ ವ್ಯಾಪ್ತಿಯ ಭೂಬಳಕೆ ವಿನ್ಯಾಸದಲ್ಲಿ ಭಾರಿ ಮಾರ್ಪಾಡು ಆಗಿದೆ. ಇದನ್ನು ಎಂಪ್ರಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಕರ್ನಾಟಕ ರಾಜ್ಯ ದೂರಸಂವೇದಿ ಆನ್ವಯಿಕ ಕೇಂದ್ರದ (ಕೆಎಸ್‌ಆರ್‌ಎಸ್‌ಎಸಿ) ನೆರವಿನಿಂದ ಈ ಪ್ರದೇಶದ ಭೂಬಳಕೆ ವಿನ್ಯಾಸವನ್ನು ಎಂಪ್ರಿ ಅಧ್ಯಯನ ನಡೆಸಿತ್ತು.
ಹತ್ತು ವರ್ಷಗಳಲ್ಲಿ ಏನೆಲ್ಲ ಬದಲಾವಣೆ?
lವಲಯ 1: 1,14,458 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ನಿಂತಿದೆ. ನಿರ್ಮಾಣ ಪ್ರದೇಶ ಎರಡು ಪಟ್ಟು ಹೆಚ್ಚಳ ಕಂಡಿದೆ.
lವಲಯ 2: ನಿರ್ಮಾಣ ಪ್ರದೇಶ 171.67 ಹೆಕ್ಟೇರ್‌ಗಳಿಂದ 239.95 ಹೆಕ್ಟೇರ್‌ಗೆ ಹೆಚ್ಚಳವಾಗಿದೆ.
lವಲಯ 3: ನಿರ್ಮಾಣ ಪ್ರದೇಶ 962.12 ಹೆಕ್ಟೇರ್‌ಗಳಿಂದ 2039.73 ಹೆಕ್ಟೇರ್‌ಗೆ ಏರಿಕೆ ಕಂಡಿದೆ.
lವಲಯ 4:ನಿರ್ಮಾಣ ಪ್ರದೇಶ 934.81 ಹೆಕ್ಟೇರ್‌ಗಳಿಂದ 2226.56 ಹೆಕ್ಟೇರ್‌ಗೆ ಹೆಚ್ಚಳವಾಗಿದೆ
ಕೈಗಾರಿಕೆಗಳಿಂದ ಮಲಿನ ನೀರು
ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶಗಳಲ್ಲಿ ಮಲಿನ ನೀರನ್ನು ಹೊರ ಬಿಡುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೈಗಾರಿಕೆಗಳಿಗೆ ತಾಜಾ ನೀರು ಬಳಸುವ ಬದಲು ಒಮ್ಮೆ ಬಳಸಿದ ನೀರನ್ನೇ ಶುದ್ಧೀಕರಿಸಿ ಬಳಸಬೇಕು. ಇದರಿಂದ ನದಿಗಳಿಗೆ ಹಾಗೂ ಅಂತರ್ಜಲಕ್ಕೆ ಮಲಿನ ನೀರು ಸೇರುವುದನ್ನು ತಡೆಯಬಹುದು ಎಂದು ಎಂಪ್ರಿ ಸಲಹೆ ನೀಡಿತ್ತು.
ಸಮರ್ಥ ತಂತ್ರಜ್ಞಾನ ಅಳವಡಿಸಿ, ಮಲಿನನೀರು ಶುದ್ಧೀಕರಣ ಘಟಕ (ಇಟಿಪಿ) ಸ್ಥಾಪನೆ ಮಾಡುವ ಮೂಲಕ ಕೈಗಾರಿಕೆಗಳು ತಾಜಾ ನೀರು ಬಳಸುವುದನ್ನು ಕಡಿಮೆ ಮಾಡಬಹುದು. ಕೆಎಸ್‌ಪಿಸಿಬಿ ಈ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸ
ಬಹುದು ಎಂದೂ ಎಂಪ್ರಿ ಸಲಹೆ ನೀಡಿತ್ತು. ಆದರೆ, ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಲೇ ಇಲ್ಲ. ಈಗಲೂ ಕೈಗಾರಿಕೆಗಳು ಮಲಿನ ನೀರನ್ನು ಹೊರಬಿಡುವುದನ್ನು ನಿಲ್ಲಿಸಿಲ್ಲ.ಕೈಗಾರಿಕೆಗಳಲ್ಲಿ ನೀರಿನ ಬಳಕೆ ಮತ್ತು ಅವುಗಳ ಮೂಲ ಹಾಗೂ ಅವುಗಳನ್ನು ಹೇಗೆ ವಿಲೇ ಮಾಡಲಾಗುತ್ತಿದೆ ಎಂಬ ಪ್ರತ್ಯೇಕ ಅಧ್ಯಯನ ನಡೆಸುವ ಅಗತ್ಯವಿದೆ. ಈ ಬಗ್ಗೆ ನಂಬಿಕಾರ್ಹ ಮಾಹಿತಿ ಲಭ್ಯವಿಲ್ಲ ಎಂದೂ ಎಂಪ್ರಿ ಹೇಳಿತ್ತು.
ನೀವು ಪ್ರತಿಕ್ರಿಯಿಸಿ...
ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಸಂರಕ್ಷಣಾ ಪ್ರದೇಶವನ್ನು 1 ಕಿ.ಮೀ. ವ್ಯಾಪ್ತಿಯಿಂದ 500 ಮೀ.ಗೆ ಇಳಿಸಲು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದ ಬಗ್ಗೆ ನೀವೂ ಪ್ರತಿಕ್ರಿಯಿಸಿ. ಹೆಸರು ಮತ್ತು ವಿಳಾಸ ಬರೆಯಲು ಮರೆಯದಿರಿ.
ವಾಟ್ಸ್ ಆ್ಯಪ್ ಸಂಖ್ಯೆ: 95133 22930
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.