ಬೆಂಗಳೂರು: ‘ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅರ್ಕಾವತಿ ಬಡಾವಣೆಯ ವಿವರಗಳನ್ನು ಮುಂದಿನ ಹತ್ತು ವಾರಗಳಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
‘ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತ ವಿವರಗಳನ್ನು ಬಿಡಿಎ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿತ್ತು.ಇದನ್ನು ಪ್ರಶ್ನಿಸಿ ಬಿಡಿಎ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಬಿಡಿಎ ತನ್ನ ಕಾರ್ಯಚಟುಟಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಬಡಾವಣೆಗಳ ರಚನೆಯ ಪ್ರತಿಯೊಂದು ವಿವರವನ್ನೂ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ನಿರ್ದೇಶಿಸಿದೆ.
ಏನಿರಬೇಕು?: ಬಡಾವಣೆಗಳ ರಚನೆಗೆ ಹೊರಡಿಸಲಾದ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗಳಲ್ಲಿ ಸೂಚಿಸಲಾದ ಜಮೀನಿನ ಒಟ್ಟು ವಿಸ್ತೀರ್ಣ, ಡಿನೋಟಿಫಿಕೇಷನ್‌ಗೆ ಕಾರಣ ಮತ್ತು ಡಿನೋಟಿಫಿಕೇಷನ್‌ನ ಪ್ರತಿಗಳನ್ನು ಗ್ರಾಮ ನಕ್ಷೆಯೊಂದಿಗೆ, ಆಯಾ ಗ್ರಾಫಿಕ್ ವಿವರಣೆಯೊಂದಿಗೆ ಪ್ರತ್ಯೇಕವಾಗಿ ಅಪ್‌ಲೋಡ್ ಮಾಡಬೇಕು. ಇದು ಗೂಗಲ್ ನಕ್ಷೆ, ಪರಿಷ್ಕೃತ ಮಾಸ್ಟರ್ ಪ್ಲಾನ್ ಇತ್ಯಾದಿ ವಿವರಗಳನ್ನು ಒಳಗೊಂಡಿರಬೇಕು.
ಯಾವಾಗ ಸ್ವಾಧೀನಪಡಿಸಿಕೊಳ್ಳಲಾಯಿತು ಮತ್ತು ಸ್ವಾಧೀನಪಡಿಸಿಕೊಂಡ ಜಮೀನಿನ ವಿಸ್ತೀರ್ಣ, ಸ್ವಾಧೀನ ಸೂಚನೆಗಳು, ಮಹಜರ್ ಮತ್ತು ಬಿಡಿಎ ಕಾಯ್ದೆ–1976ರ ಕಲಂ 16(2)ರ ಅಡಿಯಲ್ಲಿ ಅಭಿವೃದ್ಧಿ ಯೋಜನೆ ಅಧಿಸೂಚನೆಗಳ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಭೂಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯಗಳ ವಿವರಗಳು, ಅವುಗಳ ಸರ್ವೇ ನಂಬರ್‌ವಾರು ವಿವರ ಮತ್ತು ಪ್ರಕರಣಗಳ ಸ್ಥಿತಿಯನ್ನು ಅಪ್‌ಲೋಡ್ ಮಾಡಬೇಕು.
ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾದ ಜಮೀನಿನ ಒಟ್ಟು ವಿಸ್ತೀರ್ಣ, ಅಳತೆಗಳೊಂದಿಗೆ ರಚಿಸಲಾದ ಒಟ್ಟು ನಿವೇಶನಗಳ ಸಂಖ್ಯೆ ಮತ್ತು ಪ್ರತಿ ಸರ್ವೇ ನಂಬರ್‌ನಲ್ಲಿ ರಚಿಸಲಾದ ನಿವೇಶನಗಳ ಸಂಖ್ಯೆಯೊಂದಿಗೆ ನಿವೇಶನಗಳ ಸಂಖ್ಯೆ ಮತ್ತು ಪ್ರತಿ ಬಡಾವಣೆಯಲ್ಲಿ ಅವುಗಳ ಅಳತೆಯ ಬಗ್ಗೆಗಿನ ಸರ್ವೇ ಸಂಖ್ಯೆವಾರು ವಿವರಗಳು ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.