ADVERTISEMENT

ಕಾನ್‌ಸ್ಟೆಬಲ್ ಪರೀಕ್ಷೆ ಸುಗಮ; ಅದಲು– ಬದಲು ಗೊಂದಲ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
<div class="paragraphs"><p>ಕಾನ್‌ಸ್ಟೆಬಲ್ ಹುದ್ದೆಗಳ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳ ಪರಿಶೀಲನೆ ನಡೆಸುತ್ತಿರುವುದು</p></div>

ಕಾನ್‌ಸ್ಟೆಬಲ್ ಹುದ್ದೆಗಳ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳ ಪರಿಶೀಲನೆ ನಡೆಸುತ್ತಿರುವುದು

   

ಬೆಂಗಳೂರು: ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಎಆರ್ ಹಾಗೂ ಡಿಎಆರ್) ಖಾಲಿ ಇರುವ 3,064 ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗಾಗಿ ರಾಜ್ಯದ 710 ಕೇಂದ್ರಗಳಲ್ಲಿ ಭಾನುವಾರ
ಲಿಖಿತ ಪರೀಕ್ಷೆ ಸುಗಮವಾಗಿ ನಡೆಯಿತು.

ಬೆಂಗಳೂರಿನ ನ್ಯಾಷನಲ್‌ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಪ್ರತಿಗಳನ್ನು ಅದಲು–ಬದಲಾಗಿ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಿದ್ದರಿಂದ ಕೆಲ ನಿಮಿಷ ಗೊಂದಲ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್, ಅಭ್ಯರ್ಥಿಗಳ ಗೊಂದಲ ನಿವಾರಿಸಿದರು.

ADVERTISEMENT

ಕೇಂದ್ರದ ಅಭ್ಯರ್ಥಿಗಳಿಗೆ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಒಎಂಆರ್ ಪ್ರತಿ ಹಂಚಲು ಸಿಬ್ಬಂದಿಗೆ ಸೂಚಿಸಲಾಗಿತ್ತು. ಆದರೆ, ಹಂಚಿಕೆ ಸಂದರ್ಭದಲ್ಲಿ ಒಎಂಆರ್ ಪ್ರತಿಗಳು ಅದಲು–ಬದಲು ಆಗಿದ್ದವು. ಅದನ್ನು ಗಮನಿಸಿದ್ದ ಹಲವು ಅಭ್ಯರ್ಥಿಗಳು, ಒಎಂಆರ್ ಪ್ರತಿ ಬದಲಾಯಿಸಿದ್ದರು. ಆದರೆ, ಕೆಲ ಅಭ್ಯರ್ಥಿಗಳು ಯಥಾಪ್ರಕಾರ ಉತ್ತರ ಬರೆಯಲಾರಂಭಿಸಿದ್ದರು. ಕೆಲ ನಿಮಿಷಗಳ ನಂತರ, ಅದಲು–ಬದಲು ವಿಷಯ ಗೊತ್ತಾಗಿ ಅಭ್ಯರ್ಥಿಗಳು ಆತಂಕಗೊಂಡಿದ್ದರು.

‘ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಹಾಗೂ ನಕಲು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಒಎಂಆರ್ ಪ್ರತಿಗಳಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು ಮುದ್ರಿಸಲಾಗಿತ್ತು. ಜೊತೆಗೆ, ನೋಂದಣಿ ಸಂಖ್ಯೆ ಬರೆಯಲೂ ಪ್ರತ್ಯೇಕ ಬಾಕ್ಸ್‌ನಲ್ಲಿ ಅವಕಾಶ ನೀಡಲಾಗಿತ್ತು. ಒಬ್ಬರ ನೋಂದಣಿ ಸಂಖ್ಯೆಯ ಒಎಂಆರ್ ಪ್ರತಿ, ಬೇರೊಬ್ಬರಿಗೂ ಹಂಚಿಕೆ ಆಗಿದ್ದರಿಂದ ಗೊಂದಲ ಉಂಟಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಜಾಗ್ರತಾ ಕ್ರಮವಾಗಿ ಮುದ್ರಿಸಿರುವ ನೋಂದಣಿ ಸಂಖ್ಯೆ, ಒಎಂಆರ್ ಮೌಲ್ಯಮಾಪನ ವೇಳೆ ಗಣನೆಗೆ ಬರುವುದಿಲ್ಲ. ಅಭ್ಯರ್ಥಿಗಳು ಬರೆಯುವ ನೋಂದಣಿ ಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳ
ಲಾಗುವುದು. ಈ ಬಗ್ಗೆ ಅಭ್ಯರ್ಥಿಗಳಿಗೆ ಮನದಟ್ಟು ಮಾಡಿಕೊಡಲಾಗಿದೆ. ಜೊತೆಗೆ, ಎಲ್ಲರ ನೋಂದಣಿ ಸಂಖ್ಯೆ ಹಾಗೂ ಒಎಂಆರ್ ಪ್ರತಿ ಸಂಖ್ಯೆಯನ್ನು ಸೂಕ್ತವಾಗಿ ಪರಿಶೀಲಿಸಿ, ಗೊಂದಲ ನಿವಾರಣೆ ಮಾಡಲಾಯಿತು’ ಎಂದು ಹೇಳಿದರು.

ಒಂದೇ ಕೇಂದ್ರದಲ್ಲಿ 17,000 ಅಭ್ಯರ್ಥಿಗಳು: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪರೀಕ್ಷೆ ಕೇಂದ್ರದಲ್ಲಿ 17,000 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗಿದ್ದರು. ಬಹುಪಾಲು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಒಂದೇ ಕೇಂದ್ರದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಹಾಜರಾಗಿರುವುದು ಇದೇ ಮೊದಲು ಎಂದು ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.