ADVERTISEMENT

ಜಮ್ಮು–ಕಾಶ್ಮೀರದ ಗನ್‌ಮ್ಯಾನ್ ಬಂಧನ

ಎರಡು ವರ್ಷದವನಿದ್ದಾಗಲೇ ಗನ್‌ ಲೈಸನ್ಸ್ ಸಿಕ್ಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:41 IST
Last Updated 10 ಮಾರ್ಚ್ 2019, 19:41 IST

ಬೆಂಗಳೂರು: ಎರಡು ವರ್ಷದವನಿದ್ದಾಗಲೇ ಗನ್‌ ಲೈಸೆನ್ಸ್ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು–ಕಾಶ್ಮೀರದ ಜಾವೇದ್ ಇಕ್ಬಾಲ್ (21) ಎಂಬುವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ನಗರದ ಐಡಿಬಿಐ ಬ್ಯಾಂಕ್‌ನ ಖಜಾನೆಯಲ್ಲಿ ಕೆಲಸ ಮಾಡುತ್ತಿರುವ ಜಮ್ಮು–ಕಾಶ್ಮೀರದ ಕೆಲ ಗನ್‌ಮ್ಯಾನ್‌ಗಳ ಬಳಿ ನಕಲಿ ಗನ್‌ ಲೈಸೆನ್ಸ್ ಇದೆ’ ಎಂದು ಆರೋಪಿಸಿ ನಗರ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಟಿ. ಕೃಷ್ಣಮೂರ್ತಿ ಅವರು ದಾಖಲೆ ಸಮೇತ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು, ಜಾವೇದ್‌ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾವೇದ್ ಸಹ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ಮಂಜೂರು ಮಾಡಿದೆ.

ADVERTISEMENT

‘ಜಾವೇದ್ ಅವರ ತಂದೆಗೆ ಜಮ್ಮು–ಕಾಶ್ಮೀರದ ಜಿಲ್ಲಾಡಳಿತ ಗನ್ ಪರವಾನಗಿ ಕೊಟ್ಟಿತ್ತು. ಅದೇ ಪರವಾನಗಿಯನ್ನು ಬಳಸಿಕೊಂಡು ಆರೋಪಿ, ‘ರಿಟೈನರ್’ ಎಂದು ಹೇಳಿ ಹೊಸ ಪರವಾನಗಿ ಪಡೆದುಕೊಂಡಿದ್ದರು. ಅದರ ಸಮೇತ ನಗರಕ್ಕೆ ಬಂದು ಸೆಕ್ಯೂರಿಟಿ ಕಂಪನಿಯಲ್ಲಿ ಗನ್‌ ಮ್ಯಾನ್‌ ಕೆಲಸ ಗಿಟ್ಟಿಸಿಕೊಂಡಿದ್ದರು’ ಎಂದು ಪುಟ್ಟೇನಹಳ್ಳಿ ಪೊಲೀಸರು ಹೇಳಿದರು.

‘ಆರೋಪಿ ಬಳಿ ‘ರಿಟೈನರ್‌’ ಪರವಾನಗಿ ಇದೆ. ಅಂದರೆ, ವಾಸವಿದ್ದ ಸ್ಥಳದಲ್ಲಿ ಮಾತ್ರ ಗನ್‌ ಇಟ್ಟುಕೊಳ್ಳಬಹುದು. ಬೇರೆಡೆ ಸಾಗಿಸಲು ಹಾಗೂ ವಾಣಿಜ್ಯ ಉದ್ದೇಶಕ್ಕೆ ಗನ್‌ ಬಳಸುವಂತಿಲ್ಲ. ಈ ಎರಡೂ ನಿಯಮಗಳನ್ನು ಆರೋಪಿ ಉಲ್ಲಂಘಿಸಿದ್ದು, ಅದೇ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದರು.

ಹಲವರು ನಾಪತ್ತೆ: ‘ದೂರುದಾರರು ನೀಡಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅದರನ್ವಯ ಹಲವು ಗನ್‌ ಮ್ಯಾನ್‌ಗಳಿಗೆ ನೋಟಿಸ್‌ ನೀಡಲಾಗಿದೆ. ಆದರೆ, ಅವರೆಲ್ಲ ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ. ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಕಂಪನಿಯ ವಿರುದ್ಧವೂ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.