ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯಾಗೆ ಹೊರಟಿದ್ದ ಶಂಕಿತ ಉಗ್ರನ ಬಂಧನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 10:41 IST
Last Updated 31 ಆಗಸ್ಟ್ 2024, 10:41 IST
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ   

ದೇವನಹಳ್ಳಿ: ಬೆಂಗಳೂರು: ವಿಮಾನದ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖಾಧಿಕಾರಿಗಳು ಶುಕ್ರವಾರ ತಡರಾತ್ರಿ ದೇವನಹಳ್ಳಿಯಲ್ಲಿ ಬಂಧಿಸಿದ್ದಾರೆ.

ತಮಿಳುನಾಡಿನ ಅಜೀಜ್ ಅಹಮದ್‌ ಅಲಿಯಾಸ್ ಜಲೀಲ್ ಅಜೀಜ್ ಅಹಮದ್‌ ಬಂಧಿತ.

‘ಹಿಜ್ಬ್‌-ಉತ್-ತಹ್ರೀರ್‌ (ಎಚ್‌ಯುಟಿ) ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಅಜೀಜ್ ಅಹಮದ್‌, ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸೌದಿ ಅರೇಬಿಯಾಕ್ಕೆ ತೆರಳಿ, ಅಲ್ಲಿಂದ ಬರ್ಮಿಂಗ್‌ ಹ್ಯಾಮ್‌ಗೆ ಹೋಗಲು ಪ್ರಯತ್ನಿಸಿದ್ದ. ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರನನ್ನು ವಶಕ್ಕೆ ಪಡೆದುಕೊಂಡರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಈತ, ಹಿಜ್ಬ್‌ -ಉತ್-ತಹ್ರೀರ್‌ ಸಂಘಟನೆ ನಡೆಸುತ್ತಿದ್ದ ಉಗ್ರಗಾಮಿ ಚಟುವಟಿಕೆಯಿಂದ ಪ್ರಭಾವಿತನಾಗಿದ್ದ. ಇಸ್ಲಾಮಿಕ್ ಕಾನೂನು ಸ್ಥಾಪಿಸಲು ಕೆಲಸ ಮಾಡುತ್ತಿದ್ದವರ ಜತೆಗೆ ಅಜೀಜ್‌ ಸಹ ಕೈಜೋಡಿಸಿದ್ದ. ಅಜೀಜ್‌ ಸೇರಿದಂತೆ ಆರು ಶಂಕಿತರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು. ಹಿಜ್ಬ್‌–ಉತ್–ತಹ್ರೀರ್‌ ಸಂಸ್ಥಾಪಕ ತಾಕಿ ಅಲ್‌ ದಿನ್–ಅಲ್‌ ನಬಾನಿ ರಚಿಸಿದ್ದ ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸುವ ಕುರಿತು ಸಂಘಟನೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

‘ಆರು ಮಂದಿ ಶಂಕಿತರು, ಹಿಜ್ಬ್‌ –ಉತ್–ತಹ್ರೀರ್‌ ಸಂಘಟನೆಗೆ ಹಲವು ಯುವಕರನ್ನು ಸೆಳೆಯಲು ಪ್ರಯತ್ನ ಮಾಡಿದ್ದರು. ತಮ್ಮ ಗುರಿ ಸಾಧಿಸಲು ಶಿಬಿರಗಳನ್ನು ಆರಂಭಿಸಿದ್ದರು. ಅಂತಹ ಶಿಬಿರಗಳನ್ನು ಸ್ಥಾಪಿಸುವಲ್ಲಿ ಶಂಕಿತ ಉಗ್ರ ಅಜೀಜ್‌ ಪ್ರಮುಖ ಪಾತ್ರ ವಹಿಸಿದ್ದ’ ಎಂದು ಮೂಲಗಳು ಹೇಳಿವೆ.

‘ಭಾರತದ ವಿರುದ್ಧ ಮುಸ್ಲಿಂ ರಾಷ್ಟ್ರಗಳ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದ ಉಗ್ರ ಸಂಘಟನೆಯ ಪ್ರಮುಖ ಭಾಷಣಕಾರ ಹಾಗೂ ಸಂಚುಕೋರನಾಗಿ ಅಜೀಜ್‌ ಕೆಲಸ ಮಾಡುತ್ತಿದ್ದ. ಪದವಿ ಪೂರ್ಣಗೊಂಡ ಬಳಿಕ ಬರ್ಮಿಂಗ್ ಹ್ಯಾಮ್‌ಗೆ ತೆರಳಿದ್ದ. ಅಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ, ಅಲ್ಲಿನ ಪೌರತ್ವ ಪಡೆದುಕೊಂಡಿದ್ದ. ಸಂಘಟನೆಯ ಸಿದ್ಧಾಂತಗಳನ್ನು ದಕ್ಷಿಣ ಭಾರತದಲ್ಲಿ ಪಸರಿಸಲು ಪ್ರಯತ್ನಿಸುತ್ತಿದ್ದ. ಪಾಕಿಸ್ತಾನ, ತಮಿಳುನಾಡಿನ ಕೆಲವರು ಉಗ್ರ ಸಂಘಟನೆ ಸೇರಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.