ADVERTISEMENT

ಮಾ.27ಕ್ಕೆ ಚಿತ್ರಸಂತೆ, 4 ಲಕ್ಷ ಮಂದಿ ನಿರೀಕ್ಷೆ

ಸ್ವಾತಂತ್ರ್ಯ ಯೋಧರಿಗೆ ಅರ್ಪಣೆ *ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರು ಭಾಗಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 18:07 IST
Last Updated 23 ಫೆಬ್ರುವರಿ 2022, 18:07 IST
ಬಿ.ಎಲ್‌. ಶಂಕರ್‌
ಬಿ.ಎಲ್‌. ಶಂಕರ್‌   

ಬೆಂಗಳೂರು: ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸುವ ‘ಚಿತ್ರಸಂತೆ’ಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಮಾ.27ರಂದು ಕುಮಾರಕೃಪಾ ರಸ್ತೆಯಲ್ಲಿ ಹಮ್ಮಿಕೊಂಡಿದೆ.

ಕೋವಿಡ್‌ ಕಾರಣ ಕಳೆದ ವರ್ಷ ನಡೆದ 18ನೇ ಚಿತ್ರಸಂತೆ ಆನ್‌ಲೈನ್‌ಗೆ ಸೀಮಿತವಾಗಿತ್ತು. ಪರಿಷತ್ತಿನ ವೆಬ್‌ ಪೋರ್ಟಲ್‌ ಜತೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ಗಳಲ್ಲೂ ಕಲಾಕೃತಿಗಳ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಈ ವರ್ಷ ಜನವರಿ ಮೊದಲ ವಾರ ನಡೆಯಬೇಕಾದ 19ನೇ ಚಿತ್ರಸಂತೆಯು ಕೋವಿಡ್ ಮೂರನೇ ಅಲೆಯ ಕಾರಣ ಮುಂದೂಡಲ್ಪಟ್ಟಿತ್ತು. ಕೋವಿಡ್ ನಿಯಂತ್ರಣ ಹಾಗೂ ನಿರ್ಬಂಧಗಳ ಸಡಿಲಿಕೆಯಿಂದಾಗಿ ಮಾರ್ಚ್ ಕಡೆಯ ಭಾನುವಾರ ಚಿತ್ರಸಂತೆಯನ್ನು ಭೌತಿಕವಾಗಿ ಆಯೋಜಿಸಲಾಗುತ್ತಿದೆ.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ‘ಚಿತ್ರಸಂತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಸಮರ್ಪಿಸಲಾಗುತ್ತಿದೆ. ಪರಿಷತ್ತಿನ 12 ಗ್ಯಾಲರಿಗಳಲ್ಲಿ ಆಯ್ದ ಕಲಾವಿದರ ಕಲಾಕೃತಿಗಳು 10 ದಿನಗಳವರೆಗೆ ಪ್ರದರ್ಶನಕಾಣಲಿವೆ. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಸಂತೆ ನಡೆಯುವ ಸ್ಥಳದಲ್ಲಿ ದಿನವಿಡೀ ಕಲಾ ಪ್ರದರ್ಶನ ನೀಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

4 ಲಕ್ಷ ಜನ ನಿರೀಕ್ಷೆ: ‘ಚಿತ್ರಸಂತೆಗೆ 4 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಮೈಸೂರು ಸಾಂಪ್ರದಾಯಿಕ, ರಾಜಸ್ಥಾನಿ, ಮಧುಬನಿ ಸೇರಿದಂತೆ ವಿವಿಧ ಶೈಲಿಯ ಕಲಾಕೃತಿಗಳು ಪ್ರದರ್ಶನ ಕಾಣಲಿವೆ. 17ನೇ ಚಿತ್ರಸಂತೆಯಲ್ಲಿ ₹ 3 ಕೋಟಿಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಆನ್‌ಲೈನ್ ವೇದಿಕೆಯಲ್ಲಿ ನಡೆದ 18ನೇ ಚಿತ್ರಸಂತೆಯನ್ನು 11.39 ಲಕ್ಷ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ್ದರು. 1.58 ಲಕ್ಷ ಜನ ವೆಬ್‌ಪೋರ್ಟಲ್‌ಗೆ ಭೇಟಿ ನೀಡಿದ್ದರು. ಆಲ್‌ನೈನ್‌ನಲ್ಲಿ ಭೇಟಿ ನೀಡಿದ್ದ ವೀಕ್ಷಕರು ಪ್ರತಿ ಪುಟದಲ್ಲಿ 2.51 ನಿಮಿಷ ವೀಕ್ಷಿಸಿದ್ದಾರೆ’ ಎಂದು ಬಿ.ಎಲ್. ಶಂಕರ್ ಮಾಹಿತಿ ನೀಡಿದರು.

‘ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಪರಿಷತ್ತಿನ ಆವರಣದಲ್ಲಿಯೇ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆವರಣದ ಒಳಗಡೆ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದ ಎರಡು ಎಟಿಎಂ ಯಂತ್ರಗಳು ಹಾಗೂ ಹೊರಗಡೆ ಕೆನರಾ ಬ್ಯಾಂಕ್‌ನ ಒಂದು ಸಂಚಾರಿ ಎಟಿಎಂ ಇರಲಿದೆ. ಈ ಚಿತ್ರಸಂತೆಯಲ್ಲಿ ₹ 100 ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಇರಲಿವೆ. ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಖರೀದಿಸಬಹುದು’ ಎಂದು ಹೇಳಿದರು.

1,500 ಕಲಾವಿದರು ಭಾಗಿ

‘ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರುಪಾಲ್ಗೊಳ್ಳುತ್ತಿದ್ದಾರೆ’ ಎಂದು ಬಿ.ಎಲ್. ಶಂಕರ್ ಹೇಳಿದರು.

‘ವಾರದಲ್ಲಿ ‘ಚಿತ್ರಕಲಾ ಸಮ್ಮಾನ್’ ಘೋಷಣೆ’

‘ಚಿತ್ರಸಂತೆ ಅಂಗವಾಗಿ ಐವರು ಕಲಾವಿದರಿಗೆ‘ಚಿತ್ರಕಲಾ ಸಮ್ಮಾನ್’ ಪ್ರಶಸ್ತಿ ನೀಡಲಾಗುತ್ತಿದೆ.‘ಪ್ರೊ.ಎಂ.ಎಸ್.ನಂಜುಡರಾವ್ ರಾಷ್ಟ್ರೀಯ ಪ್ರಶಸ್ತಿ’ ₹ 1 ಲಕ್ಷ ನಗದು ಒಳಗೊಂಡಿದೆ.‘ಡಿ.ದೇವರಾಜ ಅರಸು ಪ್ರಶಸ್ತಿ’, ‘ವೈ.ಸುಬ್ರಹ್ಮಣ್ಯರಾಜು ಪ್ರಶಸ್ತಿ’, ‘ಎಂ.ಆರ್ಯಮೂರ್ತಿ ಪ್ರಶಸ್ತಿ’ ಮತ್ತು ‘ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿ’ಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗಳು ತಲಾ ₹ 50 ಸಾವಿರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ವಾರದಲ್ಲಿ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಚಿತ್ರಸಂತೆಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ’ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಎಸ್‌. ಅಪ್ಪಾಜಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.