ಬೆಂಗಳೂರು: ‘ವಿದೇಶದಲ್ಲಿ ಚಿತ್ರಕಲೆ ಪ್ರದರ್ಶನಕ್ಕೆ ಶಾಶ್ವತ ಗ್ಯಾಲರಿಗಳಿದ್ದು, ಅವು ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ. ಅಂತಹ ಗ್ಯಾಲರಿಗಳನ್ನು ಇಲ್ಲಿಯೂ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಶನಿವಾರ ಹಮ್ಮಿಕೊಂಡ ಸಮಾರಂಭದಲ್ಲಿ ಕಲಾ ಸಾಧಕರಿಗೆ ‘ಚಿತ್ರಕಲಾ ಸಮ್ಮಾನ್ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
ರಾಜ್ಯದ ವಿವಿಧೆಡೆ ಕಲಾ ಪ್ರದರ್ಶನಕ್ಕೆ ಗ್ಯಾಲರಿಗಳನ್ನು ನಿರ್ಮಾಣ ಮಾಡಬೇಕೆಂಬ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅವರ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪರಮೇಶ್ವರ, ‘ಕಲಾ ಕ್ಷೇತ್ರದಲ್ಲಿ ಕರ್ನಾಟಕ ಐಶ್ವರ್ಯವಂತ ರಾಜ್ಯ. ಇಲ್ಲಿನ ಜಿಲ್ಲೆಗಳಲ್ಲಿನ ಕಲೆ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯತೆ ಕಾಣಬಹುದು. ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಜಿಲ್ಲಾ ಮಟ್ಟದಲ್ಲಿ ಗ್ಯಾಲರಿ ಅಗತ್ಯ. ಪರಿಷತ್ತಿನ ಪ್ರಸ್ತಾವವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ. ವಿದೇಶಕ್ಕೆ ಹೋದಾಗ ಅಲ್ಲಿ ಶಾಶ್ವತ ಗ್ಯಾಲರಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಪ್ರವೇಶ ಶುಲ್ಕ ಪಾವತಿಸಿ, ಹೋಗಬೇಕಾಗುತ್ತದೆ. ಅಂತಹ ಗ್ಯಾಲರಿಗಳನ್ನು ಬೆಂಗಳೂರು ಅಥವಾ ರಾಜ್ಯದ ಬೇರೆಡೆಗೆ ನಿರ್ಮಿಸುವ ಪ್ರಯತ್ನ ಸರ್ಕಾರದಿಂದ ನಡೆಯಲಿದೆ’ ಎಂದು ಹೇಳಿದರು.
‘ಕಲೆ, ಸಂಗೀತ ಮತ್ತು ಸಂಸ್ಕೃತಿಯು ಜಾತಿ–ಧರ್ಮವನ್ನು ಮೀರಿರುವುದರಿಂದ ಸಮಾಜದಲ್ಲಿ ಉಳಿದುಕೊಂಡಿವೆ. ಕಲೆಯನ್ನು ಉಳಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸಗಳು ಹೆಚ್ಚಬೇಕು. ಹಿಂದೆ ರಾಜ ಮಹಾರಾಜರು ಕಲೆಯನ್ನು ಪೋಷಿಸುತ್ತಿದ್ದರು. ಈಗ ಆ ಜವಾಬ್ದಾರಿ ಸರ್ಕಾರದ ಮೇಲಿದ್ದು, ಇದನ್ನು ಪ್ರಾಮಾಣಿಕವಾಗಿ ಸರ್ಕಾರಗಳು ಮಾಡಬೇಕು. ಆಧುನಿಕ ಜಗತ್ತಿನಲ್ಲಿ ಸಂಸ್ಕೃತಿ, ಸಂಗೀತ ನಾಶವಾಗುವ ಅಪಾಯವನ್ನು ಎದುರಿಸುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕಲಾ ಪ್ರದರ್ಶನಕ್ಕೆ ಸಮಸ್ಯೆ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘ಕಲೆಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಚಿತ್ರಸಂತೆಯನ್ನು ಆಯೋಜಿಸಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಸಾಂಪ್ರದಾಯಿಕ ಕಲೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಬೆಂಗಳೂರಿನಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಗ್ಯಾಲರಿಗಳ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ನಗರದ ನಾಲ್ಕೂ ದಿಕ್ಕಿನಲ್ಲಿ ಸುಸಜ್ಜಿತ ಗ್ಯಾಲರಿಯನ್ನು ಸರ್ಕಾರ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದ ಜಿಲ್ಲೆಗಳಲ್ಲಿ ಅಲ್ಲಿನ ಇತಿಹಾಸ ಸೆರೆಹಿಡಿಯುವ ವ್ಯವಸ್ಥೆಯಿಲ್ಲ. ಬೇರೆ ಬೇರೆ ದೇಶಗಳಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ಅಲ್ಲಿನ ವಿಶೇಷತೆ ಹಾಗೂ ಸಾಧಕರ ಮಾಹಿತಿ ಸಿಗುತ್ತದೆ. ಅದೇ ರೀತಿ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸಾಧಕರನ್ನು ಪರಿಚಯಿಸುವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಮಾಹಿತಿಯನ್ನು ದಾಖಲಿಸುವ ಕೇಂದ್ರವನ್ನು ಪ್ರಾರಂಭಿಸಬೇಕು. ಅಲ್ಲಿ ಚಿತ್ರಕಲಾ ಗ್ಯಾಲರಿಯೂ ಇರಬೇಕು’ ಎಂದು ಹೇಳಿದರು.
ನಾಲ್ವರು ಕಲಾ ಸಾಧಕರಿಗೆ ಪ್ರಶಸ್ತಿ
ಸಮಾರಂಭದಲ್ಲಿ ಕಲಾವಿದರಾದ ಪ್ರೊ. ವಸುಧಾ ತೋಜುರ್ ಅವರಿಗೆ ‘ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ’ ಪ್ರೊ.ಬಿ.ವಿ. ಸುರೇಶ್ ಅವರಿಗೆ ‘ಎಂ. ಆರ್ಯಮೂರ್ತಿ ಪ್ರಶಸ್ತಿ’ ಎಲ್.ಎನ್. ತಲ್ಲೂರ್ ಅವರಿಗೆ ‘ಡಿ. ದೇವರಾಜ ಅರಸು ಪ‍್ರಶಸ್ತಿ’ ಹಾಗೂ ಬಿ.ಬಿ. ರಾಘವೇಂದ್ರ ಅವರಿಗೆ ‘ವೈ. ಸುಬ್ರಮಣ್ಯರಾಜು ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ‍್ರಶಸ್ತಿಗಳು ತಲಾ ₹ 50 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.