ADVERTISEMENT

‘ಕ್ರೀಡೆಯನ್ನು ಯುದ್ಧದಂತೆ ಬಿಂಬಿಸಲಾಗುತ್ತಿದೆ’: ಶ್ರೀ ಶ್ರೀ ರವಿಶಂಕರ್ ಗುರೂಜಿ

ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಬೇಸರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 15:42 IST
Last Updated 13 ಅಕ್ಟೋಬರ್ 2022, 15:42 IST
ಸಮ್ಮೇಳನದಲ್ಲಿ ಭಾರತದ ಹಾಕಿ ತಂಡದ ಮಾಜಿ ನಾಯಕರೂ ಆಗಿರುವ ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಅವರಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ‘ಎಥಿಕ್ಸ್ ಇನ್ ಸ್ಪೋರ್ಟ್ಸ್’ ಪ್ರಶಸ್ತಿ ಪ್ರದಾನ ಮಾಡಿದರು. ಪಂಕಜ್ ಅಡ್ವಾಣಿ, ಸಮ್ಮೇಳನದ ಸಂಚಾಲಕಿ ರಜಿತಾ ಕುಲಕರ್ಣಿ ಹಾಗೂ ಕಿರಣ್ ರಿಜಿಜು ಇದ್ದಾರೆ. –ಪ್ರಜಾವಾಣಿ ಚಿತ್ರ
ಸಮ್ಮೇಳನದಲ್ಲಿ ಭಾರತದ ಹಾಕಿ ತಂಡದ ಮಾಜಿ ನಾಯಕರೂ ಆಗಿರುವ ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಅವರಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ‘ಎಥಿಕ್ಸ್ ಇನ್ ಸ್ಪೋರ್ಟ್ಸ್’ ಪ್ರಶಸ್ತಿ ಪ್ರದಾನ ಮಾಡಿದರು. ಪಂಕಜ್ ಅಡ್ವಾಣಿ, ಸಮ್ಮೇಳನದ ಸಂಚಾಲಕಿ ರಜಿತಾ ಕುಲಕರ್ಣಿ ಹಾಗೂ ಕಿರಣ್ ರಿಜಿಜು ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶ, ಭಾಷೆಯನ್ನು ಮೀರಿ ಜನರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕ್ರೀಡೆಯನ್ನು ಯುದ್ಧದಂತೆ ಬಿಂಬಿಸಲಾಗುತ್ತಿದೆ. ಯುದ್ಧವನ್ನು ಕ್ರೀಡೆಯಂತೆ ನಡೆಸಲಾಗುತ್ತಿದೆ’ ಎಂದು ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಬೇಸರ ವ್ಯಕ್ತಪಡಿಸಿದರು.

ವರ್ಲ್ಡ್‌ ಫೋರಂ ಫಾರ್ ಎಥಿಕ್ಸ್ ಬಿಸಿನೆಸ್ ಹಾಗೂಆರ್ಟ್‌ ಆಫ್ ಲಿವಿಂಗ್ ಸಂಸ್ಥೆ ಜಂಟಿಯಾಗಿ ನಗರದಲ್ಲಿ ಗುರುವಾರ ಆಯೋಜಿಸಿದ ‘ಕ್ರೀಡೆಯಲ್ಲಿ ನಾಯಕತ್ವ ಮತ್ತು ನೀತಿ ಸಂಹಿತೆ’ ಕುರಿತಾದ 6ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಮಾತನಾಡಿದರು.

‘ನಮ್ಮಲ್ಲಿ ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸುವವರ ಸಂಖ್ಯೆ ಕಡಿಮೆಯಿದೆ. ಕ್ರೀಡಾಪಟು ತಾನು ಸಂತೋಷವಾಗಿದ್ದರೆ ಮಾತ್ರ ಬೇರೆಯವರನ್ನೂ ಆಟದ ಮೂಲಕ ರಂಜಿಸಲು ಸಾಧ್ಯ. ಕ್ರೀಡಾಪಟುಗಳಿಗೆ ಮಾನಸಿಕ ಸದೃಢತೆಯೂ ಮುಖ್ಯವಾಗುತ್ತದೆ. ಕಳೆದ 8–10 ವರ್ಷಗಳಿಂದ ಕ್ರೀಡೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ’ ಎಂದು ಹೇಳಿದರು.

ADVERTISEMENT

ಅಗತ್ಯ ಪ್ರೋತ್ಸಾಹ:ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ‘ಕ್ರೀಡೆಯಲ್ಲಿ ಗೆಲುವು, ಸೋಲಿಗಿಂತ ಭಾಗವಹಿಸುವಿಕೆ ಮುಖ್ಯ. ಆದ್ದರಿಂದಲೇ ‘ಖೇಲೋ ಇಂಡಿಯಾ’ ಕಾರ್ಯಕ್ರಮದ ಮೂಲಕ ದೇಶದಾದ್ಯಂತ ಕ್ರೀಡಾಕೂಟಗಳನ್ನು ನಡೆಸಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಯಿತು. ದೇಶದಲ್ಲಿ ಕ್ರಿಕೆಟ್ ಆಟಗಾರರು ಹೆಚ್ಚಿನ ವೇತನವನ್ನು ಪಡೆಯುತ್ತಾರೆ. ಇದಕ್ಕೆ ದೊಡ್ಡ ಸಂಖ್ಯೆಯ ವೀಕ್ಷಕರೇ ಮುಖ್ಯ ಕಾರಣ. ಕಬಡ್ಡಿ ಹೊರತುಪಡಿಸಿದರೆ ಉಳಿದ ಲೀಗ್‌ಗಳು ಯಶಸ್ಸು ಸಾಧಿಸಲಿಲ್ಲ. ಕ್ರೀಡಾ ಕ್ಷೇತ್ರ ಬೆಳವಣಿಗೆ ಹೊಂದಲು ಜನರ ಪಾತ್ರವೂ ಮುಖ್ಯ’ ಎಂದು ಹೇಳಿದರು.

‘ಇತ್ತೀಚಿನ ವರ್ಷಗಳಲ್ಲಿ ದೇಶವು ಕ್ರೀಡಾ ಕ್ಷೇತ್ರದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ, ಪ್ರೋತ್ಸಾಹ ಹಾಗೂ ತರಬೇತಿ ಒದಗಿಸಲಾಗುತ್ತಿದೆ. ಈ ಹಿಂದೆ ಕ್ರೀಡಾಪಟುಗಳಿಗೆ ಶೂ, ಸಮವಸ್ತ್ರ ಸೇರಿ ಅಗತ್ಯ ಮೂಲಸೌಕರ್ಯಗಳನ್ನೂ ನೀಡಲಾಗುತ್ತಿರಲಿಲ್ಲ. ಇದರಿಂದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿದೇಶಿ ಕ್ರೀಡಾಪಟುಗಳನ್ನು ನೋಡುತ್ತಿದ್ದಂತೆ ನಮ್ಮವರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದರು’ ಎಂದರು.

ಸಂದೀಪ್ ಸಿಂಗ್ ಸೇರಿ ಐವರಿಗೆ ಪ್ರಶಸ್ತಿ

ಸಮ್ಮೇಳನದಲ್ಲಿ ‘ಎಥಿಕ್ಸ್ ಇನ್ ಸ್ಪೋರ್ಟ್ಸ್’ ಪ್ರಶಸ್ತಿ ಘೋಷಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಮಾನವೀಯ ಮೌಲ್ಯಗಳು ಹಾಗೂ ನೈತಿಕತೆಯ ಪ್ರಾಮುಖ್ಯ ಸಾರುವ ತಂಡ ಹಾಗೂ ವ್ಯಕ್ತಿಗೆವರ್ಲ್ಡ್‌ ಫೋರಂ ಫಾರ್ ಎಥಿಕ್ಸ್ ಬಿಸಿನೆಸ್ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡುತ್ತಿದೆ. ಬರ್ಲಿನ್‌ನ ಎಫ್‌.ಸಿ. ಯೂನಿಯನ್‌, ಕ್ರೀಡೆಯಲ್ಲಿ ಮಾನಸಿಕ ಆರೋಗ್ಯದ ಪ್ರಚಾರಕ್ಕಾಗಿ ಅಂಜಾ ಹ್ಯಾಮರ್ಸೆಂಗ್–ಎಡಿನ್, ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕಿರಣ್ ರಿಜಿಜು ಹಾಗೂ ಸಂದೀಪ್ ಸಿಂಗ್ ಅವರಿಗೆ ಈ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.