ಬೆಂಗಳೂರು: ಕೆಎಸ್‌ಆರ್‌ಟಿಸಿ ವತಿಯಿಂದ ಪೀಣ್ಯದಲ್ಲಿ 9 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಸುಸಜ್ಜಿತ ಬಸ್ ನಿಲ್ದಾಣ ಕೊನೆಗೂ ಬಳಕೆಯಾಗುವ ಕಾಲ ಸನ್ನಿಹಿತವಾಗಿದೆ. ಆದರೆ, ಬಸ್ ನಿಲ್ದಾಣದ ಬದಲು ‘ಕಾರ್ಗೊ’ ನಿಲ್ದಾಣವಾಗಿ ಉಪಯೋಗಕ್ಕೆ ಬರಲಿದೆ.
ಕೆಎಸ್‌ಆರ್‌ಟಿಸಿ ‘ನಮ್ಮ ಕಾರ್ಗೊ-ಟ್ರಕ್ ಸೇವೆ’ ಯೋಜನೆಗೆ ಶನಿವಾರ ಚಾಲನೆ ನೀಡಿದೆ. ಬೆಂಗಳೂರಿನಿಂದ ಕಾರ್ಯಾಚರಣೆ ಮಾಡುವ ಟ್ರಕ್‌ಗಳಿಗೆ ಪೀಣ್ಯದ ಬಸವೇಶ್ವರ ನಿಲ್ದಾಣವನ್ನು ನಿಲುಗಡೆ ತಾಣವನ್ನಾಗಿ ಬಳಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.
₹44 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ನಿಲ್ದಾಣವನ್ನು 2014ರಲ್ಲಿ ಉದ್ಘಾಟಿಸಲಾಗಿತ್ತು. ಮೂರು ಅಂತಸ್ತಿನ ನಿಲ್ದಾಣದ ನೆಲ ಮಹಡಿಯ ಪ್ಲಾಟ್‌ಫಾರಂನಿಂದ ಉತ್ತರ ಕರ್ನಾಟಕ ಜಿಲ್ಲೆಗಳಿಗೆ, ಮೊದಲ ಮಹಡಿಯಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ತೆರಳುವ ಬಸ್‌ಗಳಿಗೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಎರಡನೇ ಮಹಡಿಯಲ್ಲಿ ವಸತಿಗೃಹ, ಹೋಟೆಲ್ ಹಾಗೂ ಅಂಗಡಿಗಳಿಗೆ ಮೀಸಲಾಗಿದ್ದವು. ಗಂಗಮ್ಮನಗುಡಿ ಹೊರ ಠಾಣೆ, ಸುಸಜ್ಜಿತ ಆಸನ ವ್ಯವಸ್ಥೆ, ಲಿಫ್ಟ್, ಕುಡಿಯುವ ನೀರು, ಶೌಚಾಲಯ, ಭದ್ರತೆ, ವೈಫೈ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಮೆಜೆಸ್ಟಿಕ್ ಬದಲು ಇಲ್ಲಿಂದಲೇ ಬಸ್ ಸಂಚರಿಸುವಂತೆ ಮಾಡಿ, ಜಿಲ್ಲೆಗಳಿಂದ ಬರುವ ಬಸ್‌ಗಳಿಗೆ ಇದೇ ಕೊನೇ ನಿಲ್ದಾಣವನ್ನಾಗಿ ಮಾಡಿ ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂಬುದು ಉದ್ದೇಶವಾಗಿತ್ತು. ಹೆದ್ದಾರಿಯಿಂದ 1 ಕಿ.ಮೀ. ಒಳಗೆ ಇರುವ ಈ ಬಸ್ ನಿಲ್ದಾಣದಿಂದ ಕೆಲವೇ ವಾರ ಬಸ್‌ಗಳು ಸಂಚರಿಸಿದ್ದವು. ಪ್ರಯಾಣಿಕರ ನೀರಸ ಸ್ಪಂದನೆ ಮತ್ತು ಖಾಸಗಿ ಬಸ್ ಮಾಲೀಕರ ಒತ್ತಡದಿಂದಾಗಿ ಬಳಿಕ ನಿಂತು ಹೋಗಿತ್ತು.
2018ರ ಏಪ್ರಿಲ್‌ನಲ್ಲಿ ಮತ್ತೆ ಬಸ್ ಸಂಚಾರ ಆರಂಭಿಸಲಾಗಿತ್ತು. ಆರಂಭಿಕ ಹಂತದಲ್ಲಿ 60 ಬಸ್‌ಗಳು ಬಸವೇಶ್ವರ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಶುರು ಮಾಡಿದ್ದವು. ಹಂತ ಹಂತವಾಗಿ ಹೆಚ್ಚಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ದೂರದ ಊರಿಗೆ ಪ್ರಯಾಣ ಬೆಳೆಸುವವರು ಮೆಜೆಸ್ಟಿಕ್‌ಗೆ ಬರುವುದನ್ನು ನಿಲ್ಲಿಸಲಿಲ್ಲ. ಪೀಣ್ಯ ಬಸ್ ನಿಲ್ದಾಣಕ್ಕೆ ತೆರಳಲಿಲ್ಲ. ಅಲ್ಲಿಂದ ಸಂಚರಿಸಿದ ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೆ ನಷ್ಟವಾಗಿ, 6 ತಿಂಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದವು. 2018ರ ಅಕ್ಟೋಬರ್ ನಂತರ ಯಾವುದೇ ಬಸ್‌ಗಳು ಬಸವೇಶ್ವರ ನಿಲ್ದಾಣದಿಂದ ಸಂಚರಿಸುತ್ತಿರಲಿಲ್ಲ.
‘ಈ ಬಸ್ ನಿಲ್ದಾಣ ಬಳಕೆಯಾಗಿದ್ದರೆ ನಗರದೊಳಗೆ ವಾಹನದಟ್ಟಣೆ ಬಹಳಷ್ಟು ಕಡಿಮೆಯಾಗುತ್ತಿತ್ತು. ಬೆಳಗಾವಿ, ಹುಬ್ಬಳ್ಳಿ ಕಲಬುರ್ಗಿ, ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಧರ್ಮಸ್ಥಳ ಸೇರಿದಂತೆ 20ಕ್ಕೂ ಅಧಿಕ ಜಿಲ್ಲೆಗಳು, ತಿರುಪತಿ ಸೇರಿದಂತೆ ಬೇರೆ ರಾಜ್ಯಗಳ ಪ್ರಮುಖ ಪ್ರದೇಶಗಳಿಗೆ 2,200ಕ್ಕೂ ಅಧಿಕ ಬಸ್‌ಗಳು ಪ್ರತಿ ದಿನ ಸಂಚರಿಸುತ್ತವೆ. ಅವೆಲ್ಲ ಪೀಣ್ಯಕ್ಕೆ ಬಂದು, ಅಲ್ಲಿಂದಲೇ ವಾಪಸ್ ಆಗುತ್ತಿದ್ದವು. ಈಗ ಕಾರ್ಗೊ ಸೇವೆ ನೀಡುವ ಟ್ರಕ್‌ಗಳಿಗಾದರೂ ಬಳಕೆ ಮಾಡಲು ಉದ್ದೇಶಿಸಿರುವುದು ಉತ್ತಮ ನಿರ್ಧಾರ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ಪೀಣ್ಯದಲ್ಲಿ ಡಿಪೊ ಮಾಡುವ ಬದಲು ಬಸ್ ನಿಲ್ದಾಣ ಮಾಡಿದ್ದರಿಂದ ಸಮಸ್ಯೆಯಾಯಿತು. ಜಯನಗರ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಪೀಣ್ಯ ಬಸ್ ನಿಲ್ದಾಣಕ್ಕೆ ಹೋಗುವುದೇ ಸಮಸ್ಯೆಯಾಗಿತ್ತು. ಪ್ರಯಾಣಿಕರು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೇ ಬರುತ್ತಿದ್ದರು. ಈಗ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವನ್ನು ಕಾರ್ಗೊ ಟ್ರಕ್ ನಿಲ್ದಾಣವಾಗಿ ಬಳಸಲು ನಿರ್ಧರಿಸಿದ್ದೇವೆ. ಈ ನಿಲ್ದಾಣದಲ್ಲಿಯೂ ಇನ್ನು ಚಟುವಟಿಕೆಗಳನ್ನು ಕಾಣಲು ಸಾಧ್ಯ.-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.