ADVERTISEMENT

ತ್ರೀಡಿ ತಂತ್ರಜ್ಞಾನದಿಂದ ಕೃತಕ ಸ್ತನ ಅಭಿವೃದ್ಧಿ!

ಮೂಗು, ಕಿವಿ, ಶ್ವಾಸನಾಳ, ಅನ್ನನಾಳ, ತುಟಿ, ಗದ್ದವನ್ನು ತಯಾರಿಸಬಹುದು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 21:07 IST
Last Updated 9 ನವೆಂಬರ್ 2022, 21:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ. ಹಾಗೆಯೇ ಆಕೆ ಅಥವಾ ಆತನ ದೇಹವೂ; ವ್ಯಕ್ತಿಯ ಸೌಂದರ್ಯದ ವೃದ್ಧಿಗೆ ಕೃತಕ ಅಂಗಾಂಗಗಳನ್ನು ತಯಾ ರಿಸುವ ಆಧುನಿಕ ತ್ರೀಡಿ ಪ್ರಿಂಟಿಂಗ್‌ ತಂತ್ರಜ್ಞಾನವೂ ನೆರವಿಗೆ ಬಂದಿದೆ.

ಸಿಲಿಕೋದಿಂದ ಮಾಡಿದ ಕೃತಕ ಅಂಗಗಳು ಮತ್ತು ಅಳವಡಿಕೆಗಳನ್ನು(ಇಂಪ್ಲಾಂಟ್) ಬೆಂಗಳೂರು ಮೂಲದ ‘ಪ್ರಯಸ್ತ’ ಎಂಬ ನವೋದ್ಯಮವು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕೈ ಹಾಕಿದೆ. ಇದೇ ಮೊದಲ ಬಾರಿಗೆ ತ್ರೀಡಿ ಪ್ರಿಂಟರ್‌ ಮೂಲಕ ವೈಯಕ್ತೀಕರಿಸಿದ (ಪರ್ಸನಲೈಸ್ಡ್) ಕೃತಕ ಸ್ತನವನ್ನು ಅಭಿವೃದ್ಧಿಪಡಿಸಿದೆ. ಇದರ ಬಳಕೆಗೆ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಒಪ್ಪಿಗೆ ನೀಡಿದೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ‘ಸೆಂಟರ್‌ ಫಾರ್‌ ಬಯೋಸಿಸ್ಟಮ್ಸ್‌ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌’ ವಿಭಾಗದಲ್ಲಿರುವ ಸಿಲಿಮ್ಯಾಕ್‌ ವಿಶೇಷ ಪ್ರಿಂಟರ್‌ ಮೂಲಕ ತ್ರೀಡಿ ಪ್ರಿಂಟೆಡ್‌ ಅಳವಡಿಕೆ ಮತ್ತು ಕೃತಕ ಅಂಗಗಳನ್ನು ತಯಾರಿಸಬಹುದಾಗಿದೆ. ವೈಯಕ್ತೀಕರಿಸಿದ ಕೃತಕ ಅಂಗದಲ್ಲಿ ಆಯಾ ವ್ಯಕ್ತಿಯ ಆಕಾರ, ಗಾತ್ರ, ಬಾಹ್ಯ ತಿರುವುಗಳು, ತೂಕ ಮತ್ತು ಸ್ಪರ್ಶಕ್ಕೆ ಅನುಗುಣವಾಗಿಯೇ ಇರುತ್ತದೆ.

ADVERTISEMENT

‘ಪ್ರಯಸ್ತ’ ನವೋದ್ಯಮದ ಸಹ ಸಂಸ್ಥಾಪಕ ವಿಕಾಸ್‌ ಗರ್ಗ್‌ ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿ, ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಕೃತಕ ಸ್ತನ ತಯಾರಿಕೆ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಿಡುಗಡೆ ಮಾಡಲಾಗುವುದು. ಕೃತಕ ಅಂಗಗಳ ತಯಾರಿಕೆ ಸೇರಿ ಇತರ ಅನ್ವಯಗಳಿಗೂ ಇನ್ನು ಒಂದು ವರ್ಷದಲ್ಲಿ ಬಳಸಬಹುದಾಗಿದೆ ಎಂದು ಹೇಳಿದರು.

ಸಾಂಪ್ರದಾಯಿಕ ವಿಧಾನದಲ್ಲಿ ಸಿಲಿಕಾನ್ ಅಳವಡಿಕೆ ಸಿದ್ಧಪಡಿಸಲು ಸಾಧ್ಯವಾಗದು ಎಂಬ ಕಾರಣಕ್ಕೆ2017 ರಲ್ಲಿ ತ್ರೀಡಿ ಪ್ರಿಂಟಿಂಗ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಯಿತು. ಮೊದಲಿಗೆ ಕೃತಕ ಸ್ತನ ತಯಾರಿಕೆ ಕೈಗೆತ್ತಿಕೊಳ್ಳಲಾಯಿತು. ದೇಹಕ್ಕೆ ಅಳವಡಿಸಿದ ಬಳಿಕ ಹರಿದು ಹೋಗದ ಮತ್ತು ಇತರ ಯಾವುದೇ ಸಮಸ್ಯೆಗಳು ಉದ್ಭವ ಆಗದಿರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅಲ್ಲದೇ ಮೂಗು, ಕಿವಿ, ಶ್ವಾಸನಾಳ, ಅನ್ನನಾಳ, ತುಟಿ, ಗದ್ದವನ್ನೂ ತ್ರೀಡಿ ಪ್ರಿಂಟಿಂಗ್‌ ಮೂಲಕ ಕೃತಕವಾಗಿ ತಯಾ ರಿಸಿ ಅಳವಡಿಸುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿದೆ ಎಂದರು.

ವೈಯಕ್ತೀಕರಿಸಿದ ಕೃತಕ ಅಂಗಗಳು ಮತ್ತು ಅಳವಡಿಕೆಗಳು ಆಯಾ ವ್ಯಕ್ತಿಯ ದೇಹ ರಚನೆಗೆ ತಕ್ಕಂತೆ ರೂಪಿಸಲಾಗುವುದು. ಇಲ್ಲವಾದರೆ, ವ್ಯಕ್ತಿಯ ಅಂಗರಚನೆಗೆ ಸರಿ ಹೊಂದದೇ ಸಮಸ್ಯೆ ಆಗುವ ಸಾಧ್ಯತೆಯೇ ಹೆಚ್ಚು. ತ್ರೀಡಿ ಪ್ರಿಂಟಿಂಗ್‌ ತಂತ್ರಜ್ಞಾನವು ಆ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.