ADVERTISEMENT

ಚಹಾ ಪುಡಿಗೂ ಕೃತಕ ಬಣ್ಣ ಬಳಕೆ: ಆಹಾರ ಇಲಾಖೆ

ಆಹಾರ ಇಲಾಖೆಯಿಂದ 49 ಮಾದರಿ ಪುಡಿಗಳ ಪರೀಕ್ಷೆ – 45 ಅಸುರಕ್ಷಿತ ಎಂದು ದೃಢ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:20 IST
Last Updated 6 ಜುಲೈ 2024, 16:20 IST
ಚಹಾ
ಚಹಾ   

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಇಲ್ಲಿ ಬಳಸುತ್ತಿರುವ ಚಹಾ ಪುಡಿಯ ವಿವಿಧ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಹಲವು ಮಾದರಿಗಳಲ್ಲಿ ಕೃತಕ ಬಣ್ಣ ಬಳಸಿರುವುದು ದೃಢಪಟ್ಟಿದೆ.

ಬೆಂಗಳೂರಿನ ವಿವಿಧೆಡೆ 49 ಚಹಾ ಪುಡಿ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವುಗಳಲ್ಲಿ 45 ಪುಡಿಗಳು ಅಸುರಕ್ಷಿತವೆಂಬ ವರದಿ ಬಂದಿದೆ.

ಈ ಮಾದರಿಗಳಿಗೆ ಕೃತಕ ಬಣ್ಣ ಹಾಗೂ ಕೆಲವೆಡೆ ತೂಕ ಹೆಚ್ಚಿಸಲು ಮರದ ಪುಡಿ ಬಳಸಿರುವುದು ದೃಢಪಟ್ಟಿದೆ. ತಯಾರಕರು ಹಾಗೂ ಇಂತಹ ಚಹಾ ಪುಡಿಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವವರ ಮೇಲೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಇಲಾಖೆಯು ನೀಡಿದೆ. 

ADVERTISEMENT

‘ಕಾಫಿ ಪುಡಿಯ 50 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವುಗಳಲ್ಲಿ ಎಲ್ಲ ಮಾದರಿಗಳು ಸುರಕ್ಷಿತವೆಂಬ ವರದಿ ಬಂದಿದೆ. ಚಹಾ ಪುಡಿಯಲ್ಲಿ ಹೆಚ್ಚಿನವು ಅಸುರಕ್ಷಿತವೆಂಬುದು ದೃಢಪಟ್ಟಿದೆ. ಇವುಗಳಲ್ಲಿ ಬ್ರ್ಯಾಂಡೆಂಡ್ ಚಹಾ ಪುಡಿಯು ಸೇರಿದೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

‘ಎಲ್ಲಾ ಪದಾರ್ಥಗಳಿಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮಾನದಂಡ ಇರುತ್ತದೆ. ಅದನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.