ADVERTISEMENT

ಬೆಂಗಳೂರು: 165 ಜಂಕ್ಷನ್‌ಗಳ ಸಿಗ್ನಲ್‌ಗೆ ‘ಎ.ಐ’ ವ್ಯವಸ್ಥೆ

ಪ್ರಸ್ತುತ 60 ಜಂಕ್ಷನ್‌ನಲ್ಲಿ ಎಟಿಸಿಎಸ್‌ ವ್ಯವಸ್ಥೆಯ ಸಿಗ್ನಲ್ ಯಶಸ್ವಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
ಬಸವನಗುಡಿ ನ್ಯಾಷನಲ್ ಕಾಲೇಜು ಸಿಗ್ನಲ್‌ನಲ್ಲಿ ಅಳವಡಿಸಿರುವ ಎ.ಐ ಆಧಾರಿತ ಸಿಗ್ನಲ್‌  
ಬಸವನಗುಡಿ ನ್ಯಾಷನಲ್ ಕಾಲೇಜು ಸಿಗ್ನಲ್‌ನಲ್ಲಿ ಅಳವಡಿಸಿರುವ ಎ.ಐ ಆಧಾರಿತ ಸಿಗ್ನಲ್‌     

ಬೆಂಗಳೂರು: ‘ನಗರದ 60 ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವಾಹನಗಳ ದಟ್ಟಣೆ ಆಧರಿಸಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ವ್ಯವಸ್ಥೆ (ಅಡಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌ – ಎಟಿಸಿಎಸ್‌) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್‌.ಅನುಚೇತ್‌ ತಿಳಿಸಿದರು.

‘ಸದ್ಯ 60 ಜಂಕ್ಷನ್‌ನಲ್ಲಿ ಎಟಿಸಿಎಸ್‌ ಅಳವಡಿಕೆ ಮಾಡಿಕೊಳ್ಳಲಾಗಿದೆ. ಬಸವನಗುಡಿ, ಜಯನಗರ, ಜೆ.ಪಿ.ನಗರ ಹಾಗೂ ಹಡ್ಸನ್‌ ವೃತ್ತದ ಸಿಗ್ನಲ್‌ಗಳಿಗೂ ಅಳವಡಿಸಲಾಗಿದೆ. ಸುಗಮ ಸಂಚಾರ ವ್ಯವಸ್ಥೆ, ಪ್ರಯಾಣಿಕರ ಸುರಕ್ಷತೆ ಹಾಗೂ ತಂತ್ರಜ್ಞಾನ ಪರಿಣಾಮದ ಕುರಿತು ಅಧ್ಯಯನ ನಡೆಸಿದ್ದು ಸುಧಾರಣೆ ಕಂಡುಬಂದಿದೆ’ ಎಂದು ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘ಕೆ.ಆರ್.ರಸ್ತೆಯಂತಹ ಪ್ರಮುಖ ಕಾರಿಡಾರ್‌ನಲ್ಲೂ ಪ್ರಯಾಣದ ಸಮಯದಲ್ಲಿ ಗಮನಾರ್ಹ ಬದಲಾವಣೆ ಆಗಿದೆ’ ಎಂದು ಹೇಳಿದರು. 

ADVERTISEMENT

‘2025ರ ಜನವರಿಗೆ 165 ಜಂಕ್ಷನ್‌ಗಳಲ್ಲಿ ಸಿಗ್ನಲ್‌ಗಳಿಗೆ ಈ ವ್ಯವಸ್ಥೆ ಅಳವಡಿಸಲಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ನಂತರ, ಉಳಿದ 235 ಜಂಕ್ಷನ್‌ನಲ್ಲಿ ಅಳವಡಿಸುವ ಗುರಿಯಿದೆ. ಕಾಮಗಾರಿ ಪೂರ್ಣವಾದ ಮೇಲೆ ನಗರದಾದ್ಯಂತ ಪೂರ್ಣಪ್ರಮಾಣದಲ್ಲಿ ಎಐ ಆಧಾರಿತ ಸಿಗ್ನಲ್‌ ವ್ಯವಸ್ಥೆ ಜಾರಿ ಬರಲಿದೆ. ಇದರಿಂದ ಪ್ರಯಾಣದ ಅವಧಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದೆ’ ಎಂದು ವಿವರಿಸಿದರು.

‘ಜಪಾನ್‌ ತಂತ್ರಜ್ಞಾನ ಆಧಾರಿತ ಮೊಡೆರಾಟೊ ವ್ಯವಸ್ಥೆಯನ್ನು 28 ಸಿಗ್ನಲ್‌ಗಳಲ್ಲಿ ಈ ಹಿಂದೆ ಅಳವಡಿಸಲಾಗಿತ್ತು. ಅದಕ್ಕಿಂತ ಈ ಹೊಸ ವ್ಯವಸ್ಥೆ ವಿಭಿನ್ನವಾಗಿದೆ. ವಾಹನಗಳ ದಟ್ಟಣೆ, ನೈಜ ಸಮಯದ ಹೊಂದಾಣಿಕೆಯಿಂದ ಹೊಸ ವ್ಯವಸ್ಥೆಯು ಕಾರ್ಯನಿರ್ವಹಣೆ ಮಾಡುತ್ತಿದೆ’ ಎಂದು ಹೇಳಿದರು.

ಹೇಗೆ ಕಾರ್ಯ ನಿರ್ವಹಣೆ?: ಹೊಸ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನ ಬಳಕೆಯಾಗಿದೆ. ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಎಟಿಸಿಎಸ್‌ ಹಸಿರು ನಿಶಾನೆ ತೋರುತ್ತದೆ. ಸಿಗ್ನಲ್‌ ಬಳಿಯ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆ ಆಧರಿಸಿ ಹಸಿರು ದೀಪ ಬೆಳಗಿಸುವ ತಂತ್ರಜ್ಞಾನವೇ ಎಟಿಸಿಎಸ್‌. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.