ಬೆಂಗಳೂರು: ಸೈಬರ್ ವಂಚಕರು ಹಣ ಸುಲಿಗೆಗೆ ದಿನಕ್ಕೊಂದು ತಂತ್ರ ಹೂಡುತ್ತಿದ್ದಾರೆ. ‘ಶಾದಿ ಡಾಟ್‌ಕಾಂ’ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ಅವಿವಾಹಿತೆಯೊಬ್ಬರಿಗೆ ವಂಚಿಸಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ.
43 ವರ್ಷ ವಯಸ್ಸಿನ ಕಲಾವಿದೆ ‘ಸೈಬರ್ ವಂಚಕರ ತಂತ್ರ’ಕ್ಕೆ ಸಿಲುಕಿ ಹಂತ ಹಂತವಾಗಿ ₹8.21 ಲಕ್ಷ ಕಳೆದುಕೊಂಡಿದ್ದಾರೆ.
ಈ ದೂರುದಾರೆಯು ಕೆಂಗೇರಿಯ ಮೈಲಸಂದ್ರ ಎನ್‌ಕ್ಲೇವ್‌ನಲ್ಲಿ ಕುಟುಂಬದ ಸದಸ್ಯರ ಜತೆಗೆ ನೆಲಸಿದ್ದಾರೆ. ಹಣ ಕಳೆದುಕೊಂಡಿರುವ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಅಪರಾಧ ಠಾಣೆಗೆ ಅವರು ದೂರು ಸಲ್ಲಿಸಿದ್ದು, ವಂಚಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318 (ಮೋಸ) ಹಾಗೂ 319ರ (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮರೈನ್ ಎಂಜಿನಿಯರ್ ಸೋಗಿನಲ್ಲಿ ವಂಚಿಸಿದ್ದ ಸೈಬರ್ ಕಳ್ಳನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
‘ಮದುವೆ ಮಾಡಿಕೊಳ್ಳಲು ಯುವಕನನ್ನು ಕಲಾವಿದೆ ಹುಡುಕಾಡುತ್ತಿದ್ದರು. ಏಪ್ರಿಲ್ 2ರಂದು ‘ಶಾದಿ ಡಾಟ್ ಕಾಂ’ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಹತ್ತು ದಿನಗಳ (ಏಪ್ರಿಲ್ 12ರಂದು) ಬಳಿಕ ಅಜಯ್ ಅಗರ್‌ವಾಲ್ ಎಂಬ ಹೆಸರಿನಲ್ಲಿ ವಂಚಕ ಮದುವೆಯ ಕೋರಿಕೆ ಕಳುಹಿಸಿದ್ದ. ಆತನ ಮದುವೆ ಕೋರಿಕೆಯನ್ನು ಕಲಾವಿದೆ ಸ್ವೀಕರಿಸಿದ್ದರು. ಇಬ್ಬರೂ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಬದಲಾವಣೆ ಮಾಡಿಕೊಂಡಿದ್ದರು. ಅದೇ ವೇಳೆ ಮರೈನ್ ಎಂಜನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ಆರೋಪಿ ತನ್ನನ್ನು ಪರಿಚಯ ಮಾಡಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.
ದಾಳಿ ತಂತ್ರ: ‘ಇಬ್ಬರೂ ವಾಟ್ಸ್‌ಆ್ಯಪ್‌ನಲ್ಲಿ ಪ್ರತಿನಿತ್ಯ ಚರ್ಚೆ ನಡೆಸುತ್ತಿದ್ದರು. ಈ ಮಧ್ಯೆ, ಮೇ ಅಂತ್ಯದಲ್ಲಿ ಮುಂಬೈಗೆ ಬರುವುದಾಗಿ ವಂಚಕ ಸಂದೇಶ ಕಳುಹಿಸಿದ್ದ. ಕಲಾವಿದೆ ಅದನ್ನೇ ನಂಬಿ, ಕಾದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಅಮೆರಿಕದಿಂದ ಮುಂಬೈಗೆ ಬರುತ್ತಿದ್ದ ಹಡಗಿನ ಮೇಲೆ ಕಳ್ಳರು ದಾಳಿ ನಡೆಸಿದ್ದಾರೆ ಎಂದು ಮೇ 22ರಂದು ಅಜಯ್ ಅಗರ್‌ವಾಲ್ ಸಂದೇಶ ಕಳುಹಿಸಿದ್ದ. ಹಡಗಿನ ಕ್ಯಾಪ್ಟನ್ ಸಮೀಪದ ಬಂದರಿಗೆ ತಲುಪಿದ್ದಾರೆ. ತಮ್ಮಲ್ಲಿರುವ ವಸ್ತುಗಳು ಹಾಗೂ ದಾಖಲಾತಿಗಳನ್ನು ನಿಮ್ಮ ಮನೆಯವರಿಗೆ ಲಾಜಿಸ್ಟಿಕ್ ಕಂಪನಿಯ ಮೂಲಕ ಕಳುಹಿಸುವಂತೆ ಕೋರಿದ್ದಾರೆ. ಭಾರತದಲ್ಲಿ ನಮ್ಮ ಕಡೆಯವರು ಯಾರೂ ಇಲ್ಲ ಎಂದು ಹೇಳಿ, ಕಲಾವಿದೆಯ ವಿಳಾಸ ಕೇಳಿದ್ದ. ಆ ಮಾತು ನಂಬಿದ್ದ ಕಲಾವಿದೆ, ವಾಟ್ಸ್ಆ್ಯಪ್‌ನಲ್ಲಿ ವಿಳಾಸ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಪತಿ ಎಂದಿದ್ದ ಪ್ರತಿನಿಧಿ’: ‘ವಿಳಾಸ ಕಳುಹಿಸಿ ಕೆಲವೇ ಹೊತ್ತಿನಲ್ಲಿ ಕಲಾವಿದೆಗೆ ಕರೆ ಮಾಡಿದ್ದ ಮತ್ತೊಬ್ಬ ವ್ಯಕ್ತಿ, ಲಾಜಿಸ್ಟಿಕ್ ಕಂಪನಿಯ ಪ್ರತಿನಿಧಿ ಎಂಬುದಾಗಿ ಪರಿಚಯಿಸಿಕೊಂಡಿದ್ದ. ತಮ್ಮ ಪತಿ ಅಜಯ್ ಅಗರ್‌ವಾಲ್ ವಿಳಾಸ ಕಳುಹಿಸಿದ್ದಾರೆ ಎಂದು ನಂಬಿಕೆ ಬರುವಂತೆ ಮಾತನಾಡಿದ್ದ. ದಾಖಲಾತಿಗಳನ್ನು ತಮ್ಮ ಮನೆಗೆ ತಲುಪಿಸುವುದಕ್ಕೆ ₹63,300 ಆಡಳಿತಾತ್ಮಕ, ನೋಂದಣಿ ಶುಲ್ಕ ಆಗಲಿದ್ದು, ಹಣ ನೀಡುವಂತೆ ಕೋರಿದ್ದ. ಬಳಿಕ, ಅಗರ್‌ವಾಲ್‌ಗೆ ಕರೆ ಮಾಡಿದ್ದ ಆಕೆ, ಶುಲ್ಕದ ಬಗ್ಗೆ ವಿಚಾರಿಸಿದ್ದರು. ನಾನು ತುರ್ತು ಕೆಲಸದಲ್ಲಿದ್ದೇನೆ. ಸದ್ಯಕ್ಕೆ ಹಣ ಪಾವತಿಸಿದ್ದರೆ ಬೆಂಗಳೂರಿಗೆ ಬಂದಾಗ ಹಣ ವಾಪಸ್ ನೀಡುತ್ತೇನೆಂದು ಹೇಳಿದ್ದ. ಅದರಂತೆ ಕಲಾವಿದೆ ಹಣ ಪಾವತಿಸಿದ್ದರು. ನಂತರ, ಕಸ್ಟಮ್ಸ್ ಶುಲ್ಕದ ಹೆಸರಿನಲ್ಲಿ ಮತ್ತೆ ₹1.29 ಲಕ್ಷ ಪಡೆದುಕೊಳ್ಳಲಾಗಿತ್ತು’ ಎಂದು ಸೈಬರ್ ವಿಭಾಗದ ಪೊಲೀಸರು ಹೇಳಿದರು.
ಆರು ಖಾತೆಯಿಂದ ಹಣ ಸಂದಾಯ
‘ಮದುವೆ ಆಗುತ್ತೇನೆಂದು ನಂಬಿಸಿ ದಾಖಲಾತಿ ಕಳುಹಿಸುವ ನೆಪದಲ್ಲಿ ಹಣ ಪಡೆದು ವಂಚಿಸಿದ್ದಾನೆಂದು ನ.8ರಂದು ಆಕೆ ದೂರು ನೀಡಿದ್ದಾರೆ. ಇಬ್ಬರ ಮಧ್ಯೆ ನಡೆದ ವಾಟ್ಸ್ಆ್ಯಪ್ ಚಾಟಿಂಗ್‌ನ ಸ್ಕ್ರೀನ್‌ಶಾಟ್ ಹಾಗೂ ಪ್ರಕರಣದ ಮಾಹಿತಿ ಪಡೆಯಲಾಗಿದೆ. ಮೇ 22ರಿಂದ ಸೆಪ್ಟೆಂಬರ್ 29ರ ತನಕ ದೂರುದಾರೆ ಹಂತ ಹಂತವಾಗಿ ತಮ್ಮ ಹಾಗೂ ಕುಟುಂಬಸ್ಥರ ಹೆಸರಿನ ಆರು ಖಾತೆಗಳಿಂದ ₹8.21 ಲಕ್ಷ ಹಣ ವರ್ಗಾಯಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.