ADVERTISEMENT

ದಸರಾದಲ್ಲಿ ನಾಡಿನ ಕಲಾವಿದರಿಗೆ ಅಪಮಾನ: ಮುದ್ದುಕೃಷ್ಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 16:08 IST
Last Updated 18 ಅಕ್ಟೋಬರ್ 2024, 16:08 IST
ವೈ.ಕೆ. ಮುದ್ದುಕೃಷ್ಣ 
ವೈ.ಕೆ. ಮುದ್ದುಕೃಷ್ಣ    

ಬೆಂಗಳೂರು: ‘ಮೈಸೂರು ದಸರಾದಲ್ಲಿ ನಾಡಿನ ಕಲಾವಿದರಿಗೆ ಅಪಮಾನ ಮಾಡಲಾಗಿದೆ. ಹೊರರಾಜ್ಯದ ಕಲಾವಿದರಿಗೆ ವಿಶೇಷ ಆತಿಥ್ಯ ನೀಡಿದರೆ, ಇಲ್ಲಿನ ಕಲಾವಿದರಿಗೆ ಉತ್ತಮ ಊಟ–ವಸತಿಯ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿಲ್ಲ’ ಎಂದು ಗಾಯಕ ವೈ.ಕೆ. ಮುದ್ದುಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ. ‘ನಾಡ ಹಬ್ಬವಾಗಿ ಬಿಂಬಿತವಾಗಿರುವ ಮೈಸೂರು ದಸರಾದಲ್ಲಿ ನಾಡಿನ ಕಲಾವಿದರನ್ನು ನಡೆಸಿಕೊಂಡ ರೀತಿ ಬೇಸರವನ್ನುಂಟು ಮಾಡಿದೆ. 11 ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಯಾವ ಕಲಾವಿದರಿಗೂ ನ್ಯಾಯ ಒದಗಿಸದಿರುವುದು ವಿಪರ್ಯಾಸ. ಗಾಯನ ನಡೆಯುತ್ತಿರುವಾಗಲೇ ವಂದನಾರ್ಪಣೆ ಮಾಡಿ, ಕಾರ್ಯಕ್ರಮ ಮೊಟಕುಗೊಳಿಸಿದ ಪ್ರಸಂಗವೂ ನಡೆದಿದೆ. ಇದು ನಾಡಿನ ಕಲಾವಿದರ ಸಮೂಹಕ್ಕೆ ಮಾಡಿದ ಅವಮಾನ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಯುವ ದಸರಾದ ನೆಪದಲ್ಲಿ ಹೊರರಾಜ್ಯದಿಂದ ಕರೆಸಿಕೊಂಡಿದ್ದ ಕಲಾವಿದರಿಗೆ ವಿಶೇಷ ಆತಿಥ್ಯ ನೀಡಿ, ಭಾರಿ ಸಂಭಾವನೆ ನೀಡಲಾಗಿದೆ. ಆದರೆ, ದಸರಾ ಸಾಂಸ್ಕೃತಿಕ ಉಪ ಸಮಿತಿಯು ಇಲ್ಲಿನ ಕಲಾವಿದರಿಗೆ ಸೂಕ್ತ ಊಟ ಹಾಗೂ ವಸತಿ ವ್ಯವಸ್ಥೆ ಕೂಡ ಕಲ್ಪಿಸಿರಲಿಲ್ಲ. ಸಂಭಾವನೆ ವಿಚಾರದಲ್ಲಿಯೂ ತಾರತಮ್ಯ ಮಾಡಲಾಗಿದೆ. ಮುಂಬರುವ ಉತ್ಸವಗಳಲ್ಲಿ ಇಂತಹ ತಾರತಮ್ಯ ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.