ADVERTISEMENT

ವ್ಯಾಪಾರಿ ಮೇಲೆ ಹಲ್ಲೆ: ಆರೋಪಿಗಳ ಬೆನ್ನಟ್ಟಿ ಹಿಡಿದು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 16:11 IST
Last Updated 3 ಜನವರಿ 2024, 16:11 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ರೋಲ್ಡ್‌ಗೋಲ್ಡ್‌ ಸರ ಹಾಗೂ ನಗದು ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಸಂಚಾರ ಠಾಣೆ ಪೊಲೀಸರು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ.

ಚಾಮುಂಡಿ ನಗರ ನಿವಾಸಿಗಳಾದ ವಿಜಯ್ (26) ಮತ್ತು ಸೇಂಥಿಲ್ (42) ಬಂಧಿತ ಆರೋಪಿಗಳು.

ADVERTISEMENT

ಉತ್ತರ ಭಾರತ ಮೂಲದ ನೂರುಲ್ಲಾ ಅವರು ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿ ಬ್ಯಾಗ್‌ ಮಾರಾಟ ಮಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ 11ಕ್ಕೆ ಬ್ಯಾಗ್‌ ಖರೀದಿಸುವ ನೆಪದಲ್ಲಿ ಇಬ್ಬರು ಆರೋಪಿಗಳು ಬಂದರು. ವ್ಯಾಪಾರಿಯಿಂದ ರೋಲ್ಡ್‌ಗೋಲ್ಡ್‌ ಸರ ಹಾಗೂ ಜೇಬಿನಲ್ಲಿದ್ದ ₹500 ನಗದು ಕಸಿದು ಪರಾರಿಯಾಗಲು ಮುಂದಾದರು.

ಇದನ್ನು ಗಮನಿಸಿದ ಸ್ಥಳೀಯರು, ಸ್ಥಳದಿಂದ ಸ್ವಲ್ಪ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಗಡಿ ರಸ್ತೆ ಸಂಚಾರ ಠಾಣೆ ಎಎಸ್‌ಐ ರಾಮಚಂದ್ರ ಮತ್ತು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಸಂಧ್ಯಾ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ, ರಾಮಚಂದ್ರ ಆರೋಪಿಗಳ ಆಟೊ ಹಿಂಬಾಲಿಸಿ ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ. ಆಗ ವಿಜಯ್, ತನ್ನ ಬಳಿಯಿದ್ದ ಸರಗಳನ್ನು ಸೇಂಥಿಲ್‌ಗೆ ಕೈಗೆ ಎಸೆದು ಪರಾರಿಯಾಗುವಂತೆ ಸೂಚಿಸಿದ್ದ. ಆಗ ಕೂಡಲೇ ಕಾರ್ಯ ಪ್ರವೃತ್ತರಾದ ಸಂಧ್ಯಾ ಅವರು ಸೇಂಥಿಲ್‌ನನ್ನು ಹಿಡಿದುಕೊಂಡಿದ್ದಾರೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಇಬ್ಬರು ಆರೋಪಿಗಳನ್ನು ಮಾಗಡಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳ ಪೈಕಿ ವಿಜಯ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕಳವು, ಹಲ್ಲೆ, ದರೋಡೆ ಪ್ರಕರಣಗಳು ದಾಖಲಾಗಿದ್ದು, ರೌಡಿಪಟ್ಟಿ ಸಹ ತೆರೆಯಲಾಗಿದೆ.

ಎಎಸ್‌ಐ ರಾಮಚಂದ್ರ ಮತ್ತು ಕಾನ್‌ಸ್ಟೇಬಲ್ ಸಂಧ್ಯಾ ಅವರ ಕರ್ತವ್ಯಪ್ರಜ್ಞೆಯನ್ನು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಶ್ಲಾಘಿಸಿದ್ದಾರೆ. ಪೊಲೀಸರಿಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದ ದೃಶ್ಯವನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.