ADVERTISEMENT

ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ: ಮೂರು ತಿಂಗಳಲ್ಲಿ 9ನೇ ಪ್ರಕರಣ

ಬೈಕ್ ಸವಾರನ ಬಂಧನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 16:16 IST
Last Updated 21 ನವೆಂಬರ್ 2024, 16:16 IST
<div class="paragraphs"><p>ಬಿಎಂಟಿಸಿ&nbsp;</p></div>

ಬಿಎಂಟಿಸಿ 

   

ಬೆಂಗಳೂರು: ಬಿಎಂಟಿಸಿ ಸಿಬ್ಬಂದಿ ಮೇಲೆ ಕರ್ತವ್ಯದ ವೇಳೆ ಹಲ್ಲೆ ನಡೆಸುವ ಪ್ರಕರಣಗಳು ಮರುಕಳಿಸುತ್ತಿದ್ದು, ದ್ವಿಚಕ್ರ ವಾಹನಕ್ಕೆ ಮುಂದೆ ಹೋಗಲು ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಬುಧವಾರ ಸಂಜೆ ಹಲ್ಲೆ ನಡೆಸಲಾಗಿದೆ.

ಘಟನೆ ಸಂಬಂಧ ಚಾಲಕ ಕುಶಾಲ್ ಕುಮಾರ್ ಅವರ ದೂರು ಆಧರಿಸಿ, ಹಲ್ಲೆ ನಡೆಸಿದ ದ್ವಿಚಕ್ರ ವಾಹನ ಸವಾರ ಮೊಹಮ್ಮದ್ ಫೈಜಲ್‌ ಎಂಬುವರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಮೂರು ತಿಂಗಳಲ್ಲಿ ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಒಂಬತ್ತು ಪ್ರಕರಣಗಳು ವರದಿಯಾಗಿವೆ. ನವೆಂಬರ್‌ ತಿಂಗಳಲ್ಲಿ ಮೂರನೇ ಬಾರಿಗೆ ಹಲ್ಲೆ ನಡೆಸಲಾಗಿದೆ.

ಘಟನೆ ವಿವರ: ‘ಮೆಜೆಸ್ಟಿಕ್​ನಿಂದ ಸಿ.ಕೆ. ಪಾಳ್ಯ ಕಡೆಗೆ ಹೊರಟಿದ್ದ ಬಸ್ ಅನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ ಬಳಿ ಕೆ.ಆರ್.​ ಸರ್ಕಲ್​ನಿಂದ ನೃಪತುಂಗ ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ತಡೆದರು. ಮುಂದೆ ಹೋಗಲು ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು.  ಸಾರ್ವಜನಿಕರ ಮುಂದೆ ನನ್ನನ್ನು ಎಳೆದಾಡಿ, ಕಿವಿ ಮತ್ತು ಭುಜದ ಮೇಲೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿ, ಪ್ರಾಣ ಬೆದರಿಕೆ ಹಾಕಿದರು. ಇದನ್ನು ಪ್ರಶ್ನಿಸಿದ ನಿರ್ವಾಹಕ ಕೃಷ್ಣ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದರು’ ಎಂದು ಚಾಲಕ ಕುಶಾಲ್ ಕುಮಾರ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು

‘ಸ್ಥಳದಲ್ಲಿದ್ದ ಕಾರಿನ ಚಾಲಕರೊಬ್ಬರು ಇದಕ್ಕೆ ಕುಮ್ಮಕ್ಕು ನೀಡಿದ್ದರು. ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದರು.  

‘ಚಾಲಕನ ಮೇಲೆ ಹಲ್ಲೆ ನಡೆಸಿದ ಹಣ್ಣಿನ ವ್ಯಾಪಾರಿ ಮೊಹಮ್ಮದ್ ಫೈಜಲ್ ಅವರನ್ನು ಬಂಧಿಸಲಾಗಿದೆ.  ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಅವರಿಗೆ ಪತ್ರ ಬರೆದಿದ್ದರು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯದಂತೆ ನಗರ ಎಲ್ಲಾ ಠಾಣೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.