ADVERTISEMENT

ಬುಕ್ಕಿಂಗ್ ರದ್ದು ಮಾಡಿದ್ದ ಯುವತಿಯ ಮೇಲೆ ಹಲ್ಲೆ: ಆಟೊ ಚಾಲಕನ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2024, 7:35 IST
Last Updated 6 ಸೆಪ್ಟೆಂಬರ್ 2024, 7:35 IST
<div class="paragraphs"><p>ಆಟೊದೊಂದಿಗೆ ಚಾಲಕ&nbsp;</p></div>

ಆಟೊದೊಂದಿಗೆ ಚಾಲಕ 

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಬುಕ್ಕಿಂಗ್ ರದ್ದು ಮಾಡಿದ ಯುವತಿಯನ್ನು ನಿಂದಿಸಿ, ಹಲ್ಲೆ ನಡೆಸಿದ ನಗರದ ಆಟೊ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಮಾಗಡಿ ರಸ್ತೆ ಠಾಣೆಯ ಪೊಲೀಸರು ಆರೋಪಿ ಆರ್. ಮುತ್ತುರಾಜ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

‘ಆಟೊ ಚಾಲಕನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಘಟನೆ ಏನು?

ಮಹಿಳೆಯೊಬ್ಬರು ಆ್ಯಪ್‌ನಲ್ಲಿ ಆಟೊ ಬುಕ್ ಮಾಡಿ, ನಂತರ ರದ್ದುಗೊಳಿಸಿ ಮತ್ತೊಂದು ಆಟೊದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕ ಹಿಂಬಾಲಿಸಿಕೊಂಡು ಹೋಗಿ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳೆಲ್ಲಾ ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊದಲ್ಲಿರುವ ಮಹಿಳೆ ಹಿಂದಿಯಲ್ಲಿ ಮಾತನಾಡುತ್ತಿದ್ದು, ‘ತಾನು ಆಟೊ ಬುಕ್ ಮಾಡಿ ರದ್ದು ಮಾಡಿದ್ದರಲ್ಲಿ ಏನು ತಪ್ಪಿದೆ? ನಿಮಗೆ ಬೇಡವಾದಲ್ಲಿ ರದ್ದು ಮಾಡುತ್ತೀರಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಆಟೊ ಚಾಲಕ, ‘ಆಟೊ ಗ್ಯಾಸ್‌ನ ದುಡ್ಡು ನಿಮ್ಮ ಅಪ್ಪ ಕೊಡುತ್ತಾನಾ’ ಎಂದು ಬೈದಿದ್ದಾನೆ.

‘ಯಾಕೆ ಕಿರುಚುತ್ತಿದ್ದೀರಿ. ಪೊಲೀಸರಿಗೆ ದೂರು ಕೊಡುವೆ’ ಎಂದು ಆಕೆ ಹೇಳಿದಾಗ, ‘ಪೊಲೀಸ್ ಠಾಣೆಗೆ ಹೋಗೋಣ’ ಎಂದು ಚಾಲಕ ದಬಾಯಿಸಿದ್ದಾನೆ. ‘ನಿಮ್ಮ ಜೊತೆ ಯಾಕೆ ಬರಬೇಕು. ನಿಮ್ಮ ನಂಬರ್ ನನ್ನ ಬಳಿ ಇದೆ, ದೂರು ನೀಡುವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಆಗ ಚಾಲಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಸ್ಥಳದಲ್ಲಿದ್ದ ಮತ್ತೊಬ್ಬ ಆಟೊ ಚಾಲಕ ಮತ್ತು ಸಾರ್ವಜನಿಕರು, ಜಗಳ ಆಡುವುದು ಬೇಡ ಎಂದು ಹೇಳಿದರೂ ಆತ ಸುಮ್ಮನಾಗಲಿಲ್ಲ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೆ, ಆಟೊ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.