ಬೆಂಗಳೂರು: ಬಿಬಿಎಂಪಿ ಕಂದಾಯ ಕಚೇರಿಯಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ವ್ಯವಸ್ಥೆ, ರಸ್ತೆಗಳ ಪರಿಸ್ಥಿತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಪರಿಶೀಲಿಸಿದರು.
ಕೆಂಪೇಗೌಡ ನಗರದ ಸಹ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಆಸ್ತಿ ಪುಸ್ತಕಗಳ ಸ್ಕಾನಿಂಗ್ ಅನ್ನು ವೀಕ್ಷಿಸಿದರು.
‘ರಿಜಿಸ್ಟರ್ ಪುಸ್ತಕದಲ್ಲಿ ಬರೆದಿರುವುದನ್ನು ಸ್ಕ್ಯಾನಿಂಗ್ ಮಾಡಿ, ಅದರ ಗುಣಮಟ್ಟ ಪರಿಶೀಲಿಸಲಾಗುತ್ತದೆ. ತದನಂತರ ಮಾಹಿತಿಯನ್ನು ಟೈಪ್ ಮಾಡಿ ವೆರಿಫಿಕೇಷನ್ ಮಾಡಿ ಸಾಫ್ಟ್‌ವೇರ್‌ನಲ್ಲಿ ಪ್ರತಿಯೊಂದು ಆಸ್ತಿಯ ವಿವರವನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಇದನ್ನು ಯಾರೂ ನಕಲು ಮಾಡಲು ಸಾಧ್ಯವಿಲ್ಲ. ಒಮ್ಮೆ ಡಿಜಿಟಲೀಕರಣವಾದ ಮೇಲೆ ಆಸ್ತಿ ಖಾತಾವನ್ನು ಆನ್ ಲೈನ್ ಮೂಲಕ ಎಲ್ಲಿ ಬೇಕಾದರೂ ನೋಡಬಹುದು’ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ವೈಟ್ ಟಾಪಿಂಗ್: ಸಿಲ್ವರ್ ಜೂಬ್ಲಿ ಪಾರ್ಕ್(ಎಸ್.ಜೆ.ಪಿ) ಜಂಕ್ಷನ್‌ನಿಂದ ಎಸ್.ಪಿ ರಸ್ತೆ ಮೂಲಕ ಹಡ್ಸನ್ ರಸ್ತೆಯವರಗೆ (ಪಾದಚಾರಿ ಮೇಲ್ಸೇತುವೆಯವರೆಗೆ) 500 ಮೀಟರ್ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಡಿ.ಕೆ. ಶಿವಕುಮಾರ್ ಈ ಸ್ಥಳವನ್ನು ಪರಿಶೀಲಿಸಿದರು.
ಧರ್ಮರಾಯ ಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯು ಹಾಳಾಗಿದ್ದು, ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಹಾಗೂ ಒಟಿಸಿ ರಸ್ತೆಯ ನಡುವಿನ ಚಿಕ್ಕಪೇಟೆ ವೃತ್ತದ ಬಳಿಯ ಕಿಲಾರಿ ರಸ್ತೆ, ಆರ್.ಟಿ ಸ್ಟ್ರೀಟ್ ರಸ್ತೆ, ಎ.ಎಸ್. ಆಚಾರ್ ಸ್ಟ್ರೀಟ್ ರಸ್ತೆಯನ್ನು ‘ಕಾಂಪ್ರೆನ್ಸಿವ್ ಡೆವಲಪ್ಮೆಂಟ್’ ಅಡಿಯಲ್ಲಿ ವೈಟ್ ಟಾಪಿಂಗ್, ಪಾದಚಾರಿ ಮಾರ್ಗ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಅಗತ್ಯ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಹೇಳಿದರು.
ಚಿಕ್ಕಪೇಟೆ ವೃತ್ತದಲ್ಲಿ ಅಳವಡಿಸಲಾಗಿದ್ದ ಅನಧಿಕೃತ ಓಎಫ್‌ಸಿ ಕೇಬಲ್ ತೆರವುಗೊಳಿಸಲು ಸೂಚನೆ ನೀಡಿದರು.
ಧನ್ವಂತ್ರಿ ರಸ್ತೆ ಮತ್ತು ಗುಬ್ಬಿ ತೋಟದಪ್ಪ ರಸ್ತೆಯ ನಡುವಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾದ ಪ್ರಮುಖ ರಸ್ತೆಯನ್ನು ಬಿಎಂಟಿಸಿಯಿಂದ ಪಾಲಿಕೆಗೆ ಹಸ್ತಾಂತರ ಮಾಡಿಸಿಕೊಳ್ಳಬೇಕು. ಇದನ್ನು ವೈಟ್ ಟಾಪಿಂಗ್ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಡಿಸಿಎಂ ಸೂಚಿಸಿದರು.
ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ವಲಯ ಆಯುಕ್ತೆ ವಿನೋತ್ ಪ್ರಿಯಾ, ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.