ADVERTISEMENT

ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ನೆರವು ಕಲ್ಪಿಸಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಮಹಾಪೀಠದ ಬ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 15:36 IST
Last Updated 12 ಆಗಸ್ಟ್ 2023, 15:36 IST
ಶನಿವಾರ ನಡೆದ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಅಧ್ಯಕ್ಷ ಸಿ.ವಿ.ದೇವರಾಜ್, ಎಂ.ಲಕ್ಷ್ಮೀನಾರಾಯಣ, ಆರ್.ಹನುಮಂತರಾಯಪ್ಪ ಇದ್ದರು
ಶನಿವಾರ ನಡೆದ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಅಧ್ಯಕ್ಷ ಸಿ.ವಿ.ದೇವರಾಜ್, ಎಂ.ಲಕ್ಷ್ಮೀನಾರಾಯಣ, ಆರ್.ಹನುಮಂತರಾಯಪ್ಪ ಇದ್ದರು   

ಬೆಂಗಳೂರು: ‘ರಾಜ್ಯದ ಲಿಂಗಾಯತ, ಒಕ್ಕಲಿಗ ಸಮುದಾಯದ ಬೆಳವಣಿಗೆ ಎಂದಿಗೂ ಕುಂಠಿತಗೊಳ್ಳಬಾರದು. ಈ ಸಮುದಾಯಗಳಿಗೆ  ಸರ್ಕಾರ ಹೆಚ್ಚಿನ ನೆರವು ಕಲ್ಪಿಸಬೇಕು’ ಎಂದು ಕೂಡಲಸಂಗಮ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್‌, ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಸಂಭ್ರಮ, ಸಾಧಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಎರಡೂ ಸಮುದಾಯಗಳಿಗೇ ಕೃಷಿಯೇ ಮೂಲವಾಗಿತ್ತು. ಬಾಲಗಂಗಾಧರನಾಥ ಸ್ವಾಮೀಜಿ ಅವರು ರಾಜ್ಯದ ದಕ್ಷಿಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ್ದರು. ಕೃಷಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುವಂತೆ ಮಾಡಿದ್ದರು’ ಎಂದು ಹೇಳಿದರು.

ADVERTISEMENT

‘ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 2019ರಲ್ಲಿ ಸಂಭವಿಸಿದ್ದ ಜಲಸ್ಫೋಟದ ವೇಳೆ ಆದಿಚುಂಚನಗಿರಿ ಮಠವು ನೆರವು ನೀಡಿತ್ತು. ಇದರಿಂದ ಪುನರ್ವಸತಿ ಸಾಧ್ಯವಾಗಿದೆ’ ಎಂದು ಹೇಳಿದರು.

‘ರೈತರ ಮಕ್ಕಳಿಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಸಿಗಬೇಕೆಂದು ಹೋರಾಟ ನಡೆಸಿದ್ದರ ಪರಿಣಾಮವಾಗಿ ಮೀಸಲಾತಿ ಸೌಲಭ್ಯ ಸಿಕ್ಕಿತ್ತು. ಆದರೆ, ಈ ವಿಚಾರವು ಈಗ ಸುಪ್ರೀಂ ಕೋರ್ಟ್‌ನಲ್ಲಿದೆ’ ಎಂದು ಹೇಳಿದರು.

‘ಪ್ರತಿಭೆ ವಿಷಯದಲ್ಲಿ ಭೇದ ತೋರಬಾರದು. ಒಕ್ಕೂಟವು ಎಲ್ಲ ಸಮುದಾಯದ ಪ್ರತಿಭೆಗಳಿಗೂ ಪುರಸ್ಕಾರ ನೀಡುತ್ತಿದೆ. ಇದು ಮಾದರಿ ಕಾರ್ಯಕ್ರಮ’ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸದಿಂದ ಮಾತ್ರ ಪ್ರಗತಿ ಸಾಧ್ಯ’ ಎಂದರು.

ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯಪುರ ಮಾತನಾಡಿ, ‘ಶಿಕ್ಷಣವು ಮಾನಸಿಕ ದಾಸ್ಯದಿಂದ ಬಿಡುಗಡೆಗೊಳಿಸಲಿದೆ. ಅಲ್ಲದೇ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೇವಲ ವೃತ್ತಿಗಾಗಿ ಶಿಕ್ಷಣ ಪಡೆಯಬಾರದು. ಜ್ಞಾನಕ್ಕಾಗಿ ಶಿಕ್ಷಣ ಪಡೆಯಬೇಕು’ ಎಂದು ಕರೆ ನೀಡಿದರು.

ಶಾಸಕ ಉದಯ ಗರುಡಾಚಾರ್‌, ಕಿಮ್ಸ್‌ ಪ್ರಾಧ್ಯಾಪಕ ಬಿ.ಸಿ.ಭಗವಾನ್‌, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ. ಹನುಮಂತಯ್ಯ, ಟ್ರಸ್ಟ್‌ ಅಧ್ಯಕ್ಷ ಸಿ.ವಿ. ದೇವರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.