ADVERTISEMENT

ಸಹಾಯಕ ಪರೀಕ್ಷೆ: ಬೆರಳಚ್ಚಿನಿಂದ ಸಿಕ್ಕಿಬಿದ್ದ ನಕಲಿ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 15:20 IST
Last Updated 28 ಏಪ್ರಿಲ್ 2024, 15:20 IST
<div class="paragraphs"><p> ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ಖಾಲಿ ಇರುವ ಸಹಾಯಕ ಹುದ್ದೆ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಗೆ ಇಬ್ಬರು ನಕಲಿ ಅಭ್ಯರ್ಥಿಗಳು ಹಾಜರಾಗಿದ್ದು, ಕೃತ್ಯವನ್ನು ಪತ್ತೆ ಮಾಡಿರುವ ಅಧಿಕಾರಿಗಳು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ಆಸ್ಟಿನ್‌ ಟೌನ್‌ನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ ಸುಮಿತ್ ಅವರು ದೂರು ನೀಡಿದ್ದಾರೆ. ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಿದ್ದ ಅಸಲಿ ಅಭ್ಯರ್ಥಿಗಳಾದ ಆತೀಷ್, ಅಜಯ್‌ಕುಮಾರ್ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಸಹಾಯಕ ಹುದ್ದೆ ನೇಮಕಾತಿಗಾಗಿ 2023ರ ಮಾರ್ಚ್ 9ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆತೀಷ್ ಹಾಗೂ ಅಜಯ್‌ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. 2024ರ ಮಾರ್ಚ್ 24ರಂದು ಲಿಖಿತ ಪರೀಕ್ಷೆ ನಡೆದಿತ್ತು. ಇಬ್ಬರ ಹೆಸರಿನಲ್ಲೂ ಪರೀಕ್ಷೆಯ ಪ್ರವೇಶಪತ್ರ ನೀಡಲಾಗಿತ್ತು.’

‘ಅಸಲಿ ಅಭ್ಯರ್ಥಿಗಳು ಕೌಶಲ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಮಾರ್ಚ್ 30ರಂದು ನಡೆದ ಕೌಶಲ ಪರೀಕ್ಷೆಗೆ ಹಾಜರಾಗಿದ್ದರು. ಲಿಖಿತ ಪರೀಕ್ಷೆ ವೇಳೆ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಬೆರಳಚ್ಚು ಹಾಗೂ ಕೌಶಲ ಪರೀಕ್ಷೆಗೆ ಹಾಜರಾಗಿದ್ದ ಅಸಲಿ ಅಭ್ಯರ್ಥಿಗಳ ಬೆರಳಚ್ಚು ಹೋಲಿಕೆ ಮಾಡಲಾಗಿತ್ತು. ಆಗ ವ್ಯತ್ಯಾಸ ಕಂಡುಬಂದಿತ್ತು. ಹೆಚ್ಚಿನ ತಪಾಸಣೆ ನಡೆಸಿದಾಗ, ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ನಕಲಿ ಅಭ್ಯರ್ಥಿಗಳು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಅಸಲಿ ಅಭ್ಯರ್ಥಿಗಳ ವಿಚಾರಣೆ ನಡೆಸಿ, ಮಾಹಿತಿ ಕಲೆಹಾಕಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.