ಬೆಂಗಳೂರು:ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ಹಸಿರು ಕಾರಿಡಾರ್ ಮೂಲಕ ಚೆನ್ನೈಗೆ ರವಾನಿಸಿ, ಅಲ್ಲಿನ ರೋಗಿಯೊಬ್ಬರಿಗೆ ಹೃದಯ ಕಸಿ ನಡೆಸಲಾಗಿದೆ.
ಚಿಕ್ಕಬಳ್ಳಾಪುರದ 26 ವರ್ಷದ ಯುವಕ ಇಲ್ಲಿನ ಕಂಪನಿಯೊಂದರಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಏ.1ರಂದು ಮನೆಗೆ ಮರಳುವಾಗ ಉತ್ತರಹಳ್ಳಿ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿ, ಹೆಚ್ಚಿನ ಚಿಕಿತ್ಸೆಗೆ ಆಸ್ಟರ್ಆರ್‌ವಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಯುವಕ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ ವೈದ್ಯರು, ಕುಟುಂಬದ ಸದಸ್ಯರ ಅನುಮತಿಯೊಂದಿಗೆಅಂಗಾಂಗ ದಾನ ಪ್ರಕ್ರಿಯೆ ನಡೆಸಿದರು.
ಯುವಕನ ಹೃದಯವನ್ನು ಆಸ್ಪತ್ರೆಯಿಂದ ಹಸಿರು ಕಾರಿಡಾರ್ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸಿ, ಅಲ್ಲಿಂದ ವಿಮಾನದ ಮೂಲಕಚೆನ್ನೈನ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಯುವಕನ ಯಕೃತ್ತು ಮತ್ತು ಮೂತ್ರಪಿಂಡವನ್ನು ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಕಸಿ ಮಾಡಲಾಗಿದೆ. ಕಣ್ಣುಗಳನ್ನು ಮಿಂಟೊ ಕಣ್ಣಿನ ಆಸ್ಪತ್ರೆಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.