ಬೆಂಗಳೂರು: ‘ಎಟಿಎಂಗೆ ತುಂಬಿಸಬೇಕಿದ್ದ ಹಣವನ್ನು ಕಳ್ಳತನವಾಗಿದೆ ಸುಳ್ಳು ಹೇಳಿ’ ದೂರು ನೀಡಿದ್ದ ಎಟಿಎಂ ನಿರ್ವಹಣೆ ಕಂಪನಿ ವಿರುದ್ಧವೇ ಬೆಳ್ಳಂದೂರು ಪೊಲೀಸರು ದೂರು ದಾಖಲಿಸಿಕೊಂಡು ಕಂಪನಿಯ ಐವರನ್ನು ಬಂಧಿಸಿದ್ದಾರೆ.
ಎಟಿಎಂ ನಿರ್ವಹಣಾ ಕಂಪನಿ ಆಗಿರುವ ಸೆಕ್ಯೂರ್ ವ್ಯಾಲ್ಯೂ ಕಂಪನಿ ವಿರುದ್ದ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಕ್ಷೇತ್ರ ಕಾರ್ಯ ವ್ಯವಸ್ಥಾಪಕ ಪ್ರತಾಪ್, ಎಟಿಎಂ ಅಧಿಕಾರಿ ಪವನ್ ಕಲ್ಯಾಣ್, ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರದ ಉಸ್ತುವಾರಿ ಧಮೇಂದ್ರ, ಇದೇ ಕಂಪನಿಯ ಮಡಿವಾಳ ವಿಭಾಗದ ಮುಖ್ಯಸ್ಥ ರಾಘವೇಂದ್ರ, ಕಂಪನಿಯ ಸಹಾಯಕ ವ್ಯವಸ್ಥಾಪಕ ಮಹೇಶ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಪ್ರಕರಣ?: ಸರ್ಜಾಪುರ ರಸ್ತೆಯ ದೊಡ್ಡ ಕನ್ನಹಳ್ಳಿಯ ಖಾಸಗಿ ಬ್ಯಾಂಕ್‌ನ ಎಂಟಿಎಂನಲ್ಲಿ ಕಳವು ನಡೆದಿತ್ತು. ಈ ಪ್ರಕರಣದ ತನಿಖೆಯ ಜಾಡು ಹಿಡಿದು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ.
ಮುಖಕ್ಕೆ ಬೆಡ್‍ಶೀಟ್ ಸುತ್ತಿಕೊಂಡು ಬಂದಿದ್ದ ಕಳ್ಳರು, ಮೊದಲು ಎಟಿಎಂ ಯಂತ್ರವಿರುವ ಕೊಠಡಿಯ ಸಿಸಿ ಟಿ.ವಿ ಕ್ಯಾಮೆರಾಗಳಿಗೆ ಕಪ್ಪು ಸ್ಪ್ರೇ ಹೊಡೆದಿದ್ದರು. ನಂತರ, ಗ್ಯಾಸ್ ಕಟರ್ ಬಳಸಿ ಎಟಿಎಂ ಬಾಕ್ಸ್ ಕತ್ತರಿಸಿ ನಗದು ದೋಚಿದ್ದರು. ₹16.56 ಲಕ್ಷ ನಗದು ಕಳವು ಆಗಿದೆ ಎಂದು ಬೆಳ್ಳಂದೂರು ಠಾಣೆಗೆ ಸೆಕ್ಯೂರ್ ವ್ಯಾಲ್ಯೂ ಕಂಪನಿ ದೂರು ನೀಡಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಅಂದು ಕಳ್ಳರು ₹6,500 ಮಾತ್ರ ಕಳವು ಮಾಡಿದ್ದರು. ಉಳಿದ ಹಣ ಎಲ್ಲಿಗೆ ಹೋಯಿತು ಎಂದು ತನಿಖೆ ಮುಂದುವರೆಸಿದಾಗ ಅಸಲಿಗೆ ಸೆಕ್ಯೂರ್ ವ್ಯಾಲ್ಯೂ ಕಂಪನಿಯ ಸಿಬ್ಬಂದಿ ₹16.50 ಲಕ್ಷವನ್ನು ಎಟಿಎಂಗೆ ತುಂಬಿಸಿರಲಿಲ್ಲ ಎಂಬುದು ಗೊತ್ತಾಯಿತು ಎಂದು ಪೊಲೀಸರು ಹೇಳಿದರು.
ಎಟಿಎಂ ಹಣ ಕಳ್ಳತನ ಮಾಡಿರುವ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತನಿಖಾ ತಂಡ ರಚಿಸಲಾಗಿತ್ತು ಎಂದು ಪೊಲೀಸರು ಹೇಳಿದರು.
ಸುಳ್ಳು ಪ್ರಕರಣ ದಾಖಲಿಸಿದ್ದ ಎಟಿಎಂ ನಿರ್ವಹಣಾ ಕಂಪನಿಯ ವಿರುದ್ಧವೇ ಸದ್ಯ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಐವರನ್ನು ಬಂಧಿಸಲಾಗಿದೆ. ನಗದು ದೋಚಿದ್ದ ಆರೋಪಿಗಳಿಗೆ ಶೋಧ ಮುಂದುವರೆದಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.