ಬೆಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಘಟಕದಲ್ಲಿದ್ದ ₹ 19.96 ಲಕ್ಷ ಕದ್ದಿದ್ದ ಆರೋಪದಡಿ ದೀಪಂಕರ್ ನಮುಸುಂದರ್ (23) ಎಂಬುವವರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಅಸ್ಸಾಂನ ದೀಪಂಕರ್, ಕೃತ್ಯ ನಡೆದಿದ್ದ ಯೂನಿಯನ್ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದ. ಹಣ ಕದ್ದು ತಲೆಮರೆಸಿಕೊಂಡಿದ್ದ ಈತನನ್ನು ಅಸ್ಸಾಂನ ಸ್ವಂತ ಗ್ರಾಮದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಎಟಿಎಂ ಘಟಕದಿಂದ ಕದ್ದಿದ್ದ ₹ 19.96 ಲಕ್ಷ ಪೈಕಿ ₹ 14.20 ಲಕ್ಷವನ್ನು ಮಾತ್ರ ಜಪ್ತಿ ಮಾಡಲಾಗಿದೆ. ಉಳಿದ ಹಣವನ್ನು ಆರೋಪಿ, ಐಷಾರಾಮಿ ಜೀವನಕ್ಕಾಗಿ ಹಲವೆಡೆ ಖರ್ಚು ಮಾಡಿದ್ದಾನೆ. ಅದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಮದುವೆ, ಐಷಾರಾಮಿ ಜೀವನಕ್ಕಾಗಿ ಕೃತ್ಯ: ‘ಆರೋಪಿ ದೀಪಂಕರ್ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಏಜೆನ್ಸಿಯೊಂದರ ಮೂಲಕ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಸೇರಿದ್ದ. ಯೂನಿಯನ್ ಬ್ಯಾಂಕ್‌ನ ವಿಲ್ಸನ್ ಗಾರ್ಡನ್ ಶಾಖೆಯ 13ನೇ ಅಡ್ಡರಸ್ತೆಯಲ್ಲಿರುವ ಎಟಿಎಂ ಘಟಕಕ್ಕೆ ನಿಯೋಜಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ವರ್ಷದ ಹಿಂದೆಯಷ್ಟೇ ಆರೋಪಿಗೆ ಯುವತಿಯೊಬ್ಬರ ಪರಿಚಯವಾಗಿತ್ತು. ನಂತರ, ಇಬ್ಬರೂ ಪ್ರೀತಿಸಲಾರಂಭಿಸಿದ್ದರು.ಮದುವೆಯಾಗಲೂ ತೀರ್ಮಾನಿಸಿದ್ದರು. ಆದರೆ, ಮದುವೆಗೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆ ಆರೋಪಿಗೆ ಕಾಡಲಾರಂಭಿಸಿತ್ತು. ಎಟಿಎಂ ಘಟಕಕ್ಕೆ ಹಣ ತುಂಬಲು ಬರುತ್ತಿದ್ದ ಸಿಬ್ಬಂದಿ ಜೊತೆ ಆತ್ಮೀಯತೆ ಹೊಂದಿದ್ದ ಆರೋಪಿ, ಘಟಕದ ಪಾಸ್‌ವರ್ಡ್ ತಿಳಿದುಕೊಂಡಿದ್ದ. ಅದೇ ಪಾಸ್‌ವರ್ಡ್ ಬಳಸಿಕೊಂಡು ಘಟಕದಲ್ಲಿರುವ ಹಣ ಕದ್ದೊಯ್ದು, ಮದುವೆಯಾಗಿ ಐಷಾರಾಮಿ ಜೀವನ ನಡೆಸಲು ಸಂಚು ರೂಪಿಸಿದ್ದ’ ಎಂದು ತಿಳಿಸಿದರು.
‘ಘಟಕದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಎಟಿಎಂ ಘಟಕದ ಬಾಗಿಲು ತೆರೆದು, ಹಣವನ್ನೆಲ್ಲ ಬ್ಯಾಗ್‌ನಲ್ಲಿ ತುಂಬಿಕೊಂಡು ಅಸ್ಸಾಂನಲ್ಲಿರುವ ತನ್ನೂರಿಗೆ ಹೋಗಿದ್ದ’ ಎಂದು ಪೊಲೀಸರು ತಿಳಿಸಿದರು.
ನೆಟ್‌ವರ್ಕ್ ಸಿಗದ ಕಾಡಿನಲ್ಲಿ ವಾಸ: ’ಹಣದ ಸಮೇತ ಸ್ವಂತ ಊರಿಗೆ ಹೋಗಿದ್ದ ಆರೋಪಿ, ತನ್ನನ್ನು ಪೊಲೀಸರು ಬಂಧಿಸಲು ಬರಬಹುದೆಂದು ಅಂದುಕೊಂಡಿದ್ದ. ಹೀಗಾಗಿ, ಸ್ವಂತ ಊರಿನಿಂದ ಸುಮಾರು 160 ಕಿ.ಮೀ. ದೂರದಲ್ಲಿ ಕಾಡಿನಲ್ಲಿದ್ದ ಸಣ್ಣ ಗ್ರಾಮವೊಂದರಲ್ಲಿ ವಾಸವಿದ್ದ. ಆ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಬರುತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದರು.
‘ಸ್ನೇಹಿತರ ಜೊತೆ ಸೇರಿ ನಿತ್ಯವೂ ಮದ್ಯದ ಪಾರ್ಟಿ ಮಾಡಿ, ಸ್ವಲ್ಪ ಹಣ ಖರ್ಚು ಮಾಡಿದ್ದ. ಅಸ್ಸಾಂನ ಪ್ರೇಕ್ಷಣೀಯ ಸ್ಥಳವೊಂದರಲ್ಲಿ ಹೋಟೆಲ್ ತೆರೆಯಲು ಆರೋಪಿ ಸಿದ್ಧತೆ ಸಹ ನಡೆಸುತ್ತಿದ್ದ. ಆರೋಪಿಯನ್ನು ಬಂಧಿಸಲು ವಿಶೇಷ ತಂಡ, ಅಸ್ಸಾಂಗೆ ಹೋಗಿತ್ತು. ಆರೋಪಿ ಅಡಗಿದ್ದ ಕಾಡಿನಲ್ಲಿದ್ದ ಗ್ರಾಮಕ್ಕೆ ಹೋಗಿ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.