ADVERTISEMENT

‘ಎಲ್ಲ ಸಮುದಾಯದ ಮೇಲೂ ದೌರ್ಜನ್ಯ’: ವೆನ್ನೆಲಾ

‘ಪ್ರಜಾ ಕವಿ ಗದ್ದರ್‌– ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮದಲ್ಲಿ ವೆನ್ನೆಲಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:25 IST
Last Updated 26 ಆಗಸ್ಟ್ 2024, 16:25 IST
‘ಪ್ರಜಾ ಕವಿ, ಪ್ರಜಾ ಗಾಯಕ ಗದ್ದರ್‌– ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮದಲ್ಲಿ ಗೀತಾ, ಅಂಬಣ್ಣ ಅರೋಲಿಕರ್, ಎನ್. ವೆಂಕಟೇಶ್, ಸೂರ್ಯ ಕಿರಣ್, ಎಲ್. ಹನುಮಂತಯ್ಯ ಅವರು ಗದ್ದರ್‌ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
‘ಪ್ರಜಾ ಕವಿ, ಪ್ರಜಾ ಗಾಯಕ ಗದ್ದರ್‌– ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮದಲ್ಲಿ ಗೀತಾ, ಅಂಬಣ್ಣ ಅರೋಲಿಕರ್, ಎನ್. ವೆಂಕಟೇಶ್, ಸೂರ್ಯ ಕಿರಣ್, ಎಲ್. ಹನುಮಂತಯ್ಯ ಅವರು ಗದ್ದರ್‌ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಬೆಂಗಳೂರು: ‘ದೇಶದಲ್ಲಿ ದಲಿತರ ಮೇಲಷ್ಟೇ ಅಲ್ಲ, ಎಲ್ಲ ಸಮುದಾಯದ ಮೇಲೂ ದೌರ್ಜನ್ಯ ನಡೆಯುತ್ತಿದೆ. ಅದನ್ನು ಯುವಜನಾಂಗ ಮೆಟ್ಟಿನಿಲ್ಲಬೇಕು’ ಎಂದು ಗದ್ದರ್‌ ಪುತ್ರಿ ವೆನ್ನೆಲಾ ಹೇಳಿದರು.

‘ಪ್ರಜಾ ಕವಿ, ಪ್ರಜಾ ಗಾಯಕ ಗದ್ದರ್‌– ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ‘ಗದ್ದರ್‌ ಅವರು ದೌರ್ಜನ್ಯದ ವಿರುದ್ಧ ಹೇಗೆ ಹೋರಾಟ ಮಾಡಬೇಕು ಎಂಬ ಮಾರ್ಗಸೂಚಿ ನೀಡಿದ್ದಾರೆ. ಆ ಹಾದಿಯಲ್ಲಿ ಯುವಕರು ನಡೆಯಬೇಕಿದೆ’ ಎಂದರು.

‘ಭಾರತದ ರಾಜ್ಯಾಂಗ ರಕ್ಷಣೆಯಾಗಬೇಕು. ನಮಗೆ ನಮ್ಮ ಹಕ್ಕು ದೊರೆಯಬೇಕು. ಸ್ವಾತಂತ್ರ್ಯಕ್ಕಾಗಿ ಮರು ಹೋರಾಟ ಮಾಡಬೇಕಿದೆ. ಪ್ರಜೆಗಳಿಗಾಗಿ ಗದ್ದರ್‌ ಅವರು ಮಾಡಿದ ಹೋರಾಟವನ್ನು ಮುಂದುವರಿಸುತ್ತಿರುವ ನಿಮ್ಮೆಲ್ಲರ ಜೊತೆಗೆ ನಾನೂ ಬರುತ್ತೇನೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ‘ದಕ್ಷಿಣ ಭಾರತದ ಸಾಂಸ್ಕೃತಿಕ ಕ್ರಾಂತಿ’ ಆಗಬೇಕಿದೆ. ಇದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದೆ. ಸೋತರೂ ನಾನು ಹೋರಾಟ ನಿಲ್ಲಿಸುವುದಿಲ್ಲ’ ಎಂದು ತಿಳಿಸಿದರು.

ಗದ್ದರ್‌ ಫೌಂಡೇಷನ್‌ನ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಗದ್ದರ್‌ ಪುತ್ರ ಸೂರ್ಯಕಿರಣ್‌ ಮಾತನಾಡಿ, ‘ಗದ್ದರ್‌ ಅವರ ಕಲಾ ಸಾಹಿತ್ಯವನ್ನು ದೇಶದ ಎಲ್ಲ ಮೂಲೆಗಳಿಗೆ ತಲುಪಿಸುವ ಉದ್ದೇಶದಿಂದ ಎರಡು ಪುಸ್ತಕವನ್ನು ಹೊರತರಲಾಗಿದೆ. ಇನ್ನೂ 50 ಪುಸ್ತಕಗಳನ್ನು ಪ್ರತಿಷ್ಠಾನದಿಂದ ಪ್ರಕಟಿಸಲಾಗುತ್ತದೆ’ ಎಂದು ಹೇಳಿದರು.

‘ಗದ್ದರ್‌ ಅವರ ಧ್ಯೇಯೋದ್ದೇಶಗಳನ್ನು ಎಲ್ಲ ಪ್ರಜೆಗಳಿಗೆ ತಲುಪಿಸಲು ‘ಅಖಿಲ ಭಾರತ ಗದ್ದರ್‌ ಸಾಂಸ್ಕೃತಿಕ ವೇದಿಕೆ’ಯನ್ನು ಸ್ಥಾಪಿಸುವ ಚಿಂತನೆ ನಡೆದಿದೆ’ ಎಂದು ತಿಳಿಸಿದರು.

ಗದ್ದರ್‌ ಗೀತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಗದ್ದರ್‌ ಅವರ 80ರ ದಶಕದ ಆಲೋಚನೆಗಳು ಇಂದಿಗೆ ಪ್ರಸ್ತುತವಾಗಿಲ್ಲ. ಅವರ ಆಶಯಗಳನ್ನು ಮುಂದುವರಿಸಲು ರಾಜಕೀಯವಾದ ಬಲ ತಂದುಕೊಳ್ಳಬೇಕಿದೆ’ ಎಂದರು.

‘ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜುವಂತಿರುತ್ತದೆ. ಇದನ್ನು ಗದ್ದರ್‌ ಮಾಡಿದರು. ತುಳಿತಕ್ಕೆ ಒಳಗಾಗಿರುವ ಸಮುದಾಯಕ್ಕೆ ಅಕ್ಷರದ ಅರಿವಾದರೆ ಅವರು ಮನುಷ್ಯರಾಗುತ್ತಾರೆ. ನಂತರ ದೌರ್ಜನ್ಯದಿಂದ ಹೊರಬರುತ್ತಾರೆ ಎಂದು ಅವರು ಭಾವಿಸಿದ್ದರು’ ಎಂದು ಲೇಖಕ ಎಲ್‌. ಹನುಮಂತಯ್ಯ ಹೇಳಿದರು.

‘ಗದ್ದರ್‌ ಅವರನ್ನು ‘ಕವಿ’ ಎಂದು ವಿದ್ವತ್‌ ಲೋಕ ಒಪ್ಪಿಕೊಂಡಿರಲಿಲ್ಲ. ಪಟ್ಟಭದ್ರ ಹಿತಾಸಕ್ತಿಗಳನ್ನು ಪ್ರಶ್ನೆ ಮಾಡದೆ, ಹೌದೌದು ಎಂದು ಹೇಳಿಕೊಂಡರಷ್ಟೇ ಅದು ವಿದ್ವತ್‌ ಲೋಕ’ ಎಂದು ಅಭಿಪ್ರಾಯಪಟ್ಟರು.

ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಸಂಘಟನಾ ಕಾರ್ಯದರ್ಶಿ ಮಾವಳ್ಳಿ ಶಂಕರ್‌, ಕೋಲಾರದ ಜನವಾದಿ ಮಹಿಳಾ ಸಂಘಟನೆಯ ಗೀತಾ, ಹೋರಾಟಗಾರರಾದ ಎನ್‌. ವೆಂಕಟೇಶ್‌, ಅಂಬಣ್ಣ ಅರೋಲಿಕರ್‌ ಭಾಗವಹಿಸಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಕಲಾ ತಂಡಗಳ ಗಾಯಕರು ಗದ್ದರ್‌ ಅವರ ಗೀತೆಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.