ADVERTISEMENT

ಸಚಿವ ಭೈರತಿ ಬಸವರಾಜ್ ಬೆಂಬಲಿಗ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 13:43 IST
Last Updated 23 ಆಗಸ್ಟ್ 2020, 13:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೆ.ಆರ್‌.ಪುರ: ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ ಆಟೊ ಬಾಬು ಎಂಬುವರ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಗುಂಡಿನಿಂದ ತಪ್ಪಿಸಿಕೊಂಡಿದ್ದ ಬಾಬು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಯನ್ನೂ ಮಾಡಲಾಗಿದ್ದು, ಗಾಯಗೊಂಡಿರುವ ಅವರನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಹಲವು ವರ್ಷಗಳಿಂದ ಸ್ನೇಹಿತರ ಜೊತೆ ಸೇರಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಬಾಬು, ಹಳೇ ಪೊಲೀಸ್ ಠಾಣೆ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವೇಳೆಯಲ್ಲಿ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು’ ಎಂದು ಕೆ.ಆರ್.ಪುರ ಪೊಲೀಸರು ಹೇಳಿದರು.

‘ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದ ಬಾಬು, ರಕ್ಷಣೆಗಾಗಿ ಕೂಗಾಡಿದ್ದರು. ಅಷ್ಟರಲ್ಲಿ ಆರೋಪಿಗಳು, ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ನಂತರ, ಸ್ಥಳೀಯರು ಬಾಬು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ’ ಎಂದರು.

ADVERTISEMENT

ಸಚಿವ ಭೈರತಿ ಬಸವರಾಜ್ ಅವರ ಬೆಂಬಲಿಗರಾಗಿದ್ದ ಬಾಬು ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು.

ಇಬ್ಬರು ವಶಕ್ಕೆ: ದಾಳಿ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಸ್ಥಳೀಯ ನಿವಾಸಿಯಾದ ಮಿರ್ಜಾ ಎಂಬುವರು ರಂಜಾನ್ ಹಬ್ಬದಲ್ಲಿ ತಡರಾತ್ರಿಯವರೆಗೆ ಸಮೋಸಾ ಅಂಗಡಿ ತೆರೆದಿದ್ದರು. ಅದನ್ನ ಗಮನಿಸಿದ್ದ ಬಾಬು ಮತ್ತು ಸ್ನೇಹಿತರು, ಬೇಗ ಅಂಗಡಿ ಮುಚ್ಚುವಂತೆ ಹೇಳಿದರು. ಆ ಸಂಬಂಧ ಎರಡು ಗುಂಪಿನ ನಡುವೆ ವೈಷಮ್ಯ ಉಂಟಾಗಿತ್ತು. ಅದುವೇ ಈ ದಾಳಿಗೆ ಕಾರಣವಿರುವ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.