ADVERTISEMENT

ಬೆಂಗಳೂರು | ಕತ್ತಿಯಿಂದ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ; ನಾಲ್ವರ ಬಂಧನ

ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:25 IST
Last Updated 2 ಜುಲೈ 2024, 15:25 IST
ಈರಣ್ಣ 
ಈರಣ್ಣ    

ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ, ಪಾದಚಾರಿಗಳಿಂದ ಮೊಬೈಲ್‌ ಹಾಗೂ ಹಣ ಕಸಿದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೂನ್‌ 23ರಂದು ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿ ನಡೆದು ತೆರಳುತ್ತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್‌ ಕಸಿದು ಪರಾರಿಯಾಗಿದ್ದ ಬಿಹಾರದ ರಾಕೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹20 ಸಾವಿರ ಮೌಲ್ಯದ ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದೆ.‌

‘ಹೊರವರ್ತುಲ ರಸ್ತೆಯಲ್ಲಿರುವ ಎಟಿಎಂನಲ್ಲಿ ವ್ಯಕ್ತಿಯೊಬ್ಬರು ₹4 ಸಾವಿರ ಹಣ ಡ್ರಾ ಮಾಡಿಕೊಂಡು ಮನೆಗೆ ನಡೆದು ತೆರಳುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು, ಮೊಬೈಲ್‌ ಹಾಗೂ ಹಣ ಕಸಿದು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

ಮತ್ತೊಂದು ಪ್ರಕರಣದಲ್ಲಿ ವಿಭೂತಿಪುರದ ಶಾಲೆಯ ಬಳಿ ವ್ಯಕ್ತಿಯೊಬ್ಬರಿಂದ ಮೊಬೈಲ್‌ ಕಸಿದು ಪರಾರಿಯಾಗಿದ್ದ ಆರೋಪಿಗಳಾದ ಈರಣ್ಣ, ರಾಜೇಶ್‌ಕುಮಾರ್‌ ಹಾಗೂ ರಯಾನ್‌ ಮ್ಯಾಥ್ಯು ಎಂಬುವವರನ್ನು ಬಂಧಿಸಲಾಗಿದೆ.

‘ಹಣ ನೀಡುವಂತೆ ಬೆದರಿಕೆ ಹಾಕಿದ್ದ ಆರೋಪಿಗಳು, ಹಣವಿಲ್ಲದ ಎಂದಾಗ ಕತ್ತಿಯಿಂದ ಹಲ್ಲೆ ನಡೆಸಿದ್ದರು. ಕ್ಯೂಆರ್‌ ಕೋಡ್‌ ಮೂಲಕ ₹4 ಸಾವಿರ ವರ್ಗಾವಣೆ ಮಾಡಿಸಿಕೊಂಡು ಪರಾರಿ ಆಗಿದ್ದರು. ಮೊಬೈಲ್‌ ಸಹ ಕಸಿದುಕೊಂಡಿದ್ದರು. ಹಣ ಕಳೆದುಕೊಂಡವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹50 ಸಾವಿರ ಮೌಲ್ಯದ ಎರಡು ಮೊಬೈಲ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಆಭರಣ ಕಳ್ಳತನ–ಬಂಧನ: ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ ಎಚ್‌ಎಎಲ್‌ನ ನಲ್ಲೂರು ಫಾರಂ ನಿವಾಸಿ ಮಲ್ಲಿಕಾರ್ಜುನ್‌(24)  ಎಂಬಾತನನ್ನು ಇದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ‌ಆರೋಪಿಯಿಂದ 25 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

‘ಠಾಣಾ ವ್ಯಾಪ್ತಿಯ ಮನೆಯೊಂದರ ಮಾಲೀಕರು, ಕಿಟಕಿ ಬಳಿ ಮನೆ ಕೀಲಿಯನ್ನು ಬಚ್ಚಿಟ್ಟು ಕೆಲಸಕ್ಕೆ ತೆರಳಿದ್ದರು. ಮನೆ ಬಳಿಗೆ ಬಂದಿದ್ದ ಆರೋಪಿ ಕೀಲಿಯನ್ನು ಹುಡುಕಿ ಬೀಗ ತೆಗೆದು ಚಿನ್ನಾಭರಣ ಕಳವು ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಮಲ್ಲಿಕಾರ್ಜುನ್‌ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಈತನ ವಿರುದ್ಧ ಈ ಹಿಂದೆ ಜೀವನ್‌ ಭಿಮಾ ನಗರ ಠಾಣೆಯಲ್ಲಿ ನಾಲ್ಕು, ಎಚ್‌ಎಎಲ್‌ ಠಾಣೆಯಲ್ಲಿ ಎರಡು ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸರು ತಿಳಿಸಿದರು. 

ರಾಜೇಶ್‌ ಕುಮಾರ್‌ 
ರೈಯಾನ್‌ ಮ್ಯಾಥ್ಯು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.