ADVERTISEMENT

ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ: ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 16:28 IST
Last Updated 30 ಅಕ್ಟೋಬರ್ 2024, 16:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ನಿಲ್ದಾಣದ ಬಳಿ ಕಳೆದ ವಾರ ಬಿಎಂಟಿಸಿ ಬಸ್‌ ನಿರ್ವಾಹಕ ಹಾಗೂ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಕಾರ್ತಿಕ್‌ (20) ಹಾಗೂ ಕಿರಣ್‌(20) ಎಂಬುವವರನ್ನು ಡಿ.ಜೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಸ್‌ ಅಡ್ಡಗಟ್ಟಿ ಮುಂದಿನ ಬಾಗಿಲು ತೆಗೆದು ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು’ ಎಂದು ಆರೋಪಿಸಿ ಚಾಲಕ ಗಗನ್‌ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ADVERTISEMENT

‘ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು, ನಿರ್ವಾಹಕ ಶಿವಕುಮಾರ್ ಮತ್ತು ಚಾಲಕ ಗಗನ್​ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಪರಾರಿ ಆಗಿದ್ದರು. ರಸ್ತೆಯಲ್ಲೇ ಹೊಡೆದಾಟ ಮಾಡಿಕೊಂಡಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಯಲಹಂಕ ಹಾಗೂ ಶಿವಾಜಿನಗರ ಮಾರ್ಗದ ಬಸ್‌ ಅನ್ನು ಸಂಜೆ 5.25ರ ಸುಮಾರಿಗೆ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್‌ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ವಾಹನದಲ್ಲಿ ಬಂದಿದ್ದ ಆರೋಪಿಗಳು, ಒಳ ಪ್ರವೇಶಿಸಿ ಗಗನ್​ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಈ ವೇಳೆ ತಡೆಯಲು ಮುಂದಾದ ಶಿವಕುಮಾರ್ ಅವರನ್ನೂ ಸಹ ಬಸ್‌ನಿಂದ ಹೊರಗಡೆ ಎಳೆದು ಹಲ್ಲೆ ಮಾಡಿದ್ದರು. ಈ ಎಲ್ಲ ದೃಶ್ಯಗಳು ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ಹೇಳಿದರು.

‘ಬಸ್‌ ತೆರಳುತ್ತಿದ್ದ ಮಾರ್ಗದಲ್ಲಿ ಆರೋಪಿಗಳಿಬ್ಬರೂ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ರಸ್ತೆಯಲ್ಲಿ ಜಾಗ ಬಿಡದ ವಿಚಾರಕ್ಕೆ ಹಲ್ಲೆ ನಡೆಸಿದ್ದೆವು ಎಂಬುದಾಗಿ ಆರೋಪಿಗಳು ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.