ADVERTISEMENT

ನಕಲಿ ಅಂಕಪಟ್ಟಿ ಮೂಲಕ ನೌಕರಿ ಗಿಟ್ಟಿಸಲು ಯತ್ನ: 48 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 16:02 IST
Last Updated 30 ಆಗಸ್ಟ್ 2024, 16:02 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಕಲಿ ಅಂಕಪಟ್ಟಿ ಹಾಗೂ ದಾಖಲಾತಿ ಸಲ್ಲಿಸಿ ಜಲ ಸಂಪನ್ಮೂಲ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಪಡೆಯಲು ಯತ್ನಿಸಿದ್ದ 37 ಅಭ್ಯರ್ಥಿಗಳು, ಅವರಿಗೆ ಸಹಕರಿಸಿದ ಮೂವರು ಸರ್ಕಾರಿ ನೌಕರರು ಹಾಗೂ 11 ಮಂದಿ ಮಧ್ಯವರ್ತಿಗಳನ್ನು ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಕಲಬುರಗಿಯ ಮೊರಾರ್ಜಿ ದೇಸಾಯಿ ವಸತಿಯುತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಜೋಗದ ಕೆಪಿಸಿಎಲ್‌ನ ದ್ವಿತೀಯ ದರ್ಜೆ ಸಹಾಯಕ ಕೃಷ್ಣ ಗುರುನಾಥ್‌ ರಾಥೋಡ್‌, ಹಾಸನ ಜಿಲ್ಲೆಯ ಜಲ ಸಂಪನ್ಮೂಲ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪ್ರದೀಪ್, ಮಧ್ಯವರ್ತಿಗಳಾದ ಹಾಸನದ ಟಿ.ರವಿ, ಮಂಡ್ಯ ಜಿಲ್ಲೆ ಮಳವಳ್ಳಿಯ ಪ್ರದೀಪ್‌, ಜೇವರ್ಗಿಯ ನಿಂಗಪ್ಪ ನಡುವಿನಮನಿ, ವಿಜಯಪುರ ಜಿಲ್ಲೆ ಸಿಂಧಗಿಯ ಮಲ್ಲಿಕಾರ್ಜುನ್‌ ಸೋಪುರ, ಕಲಬುರಗಿಯ ಮುಸ್ತಾಫಾ, ಕೆಜಿಎಫ್‌ನ ಸುರೇಶ್‌ಕುಮಾರ್‌, ಬೆಂಗಳೂರಿನ ಶರತ್‌, ತುಮಕೂರಿನ ಮುತ್ತುರಾಜ್ ಬಂಧಿತರು.

ಬಂಧಿತರಿಂದ 17 ಮೊಬೈಲ್‌,  ₹40 ಲಕ್ಷ ಮೌಲ್ಯದ ಎರಡು ಕಾರುಗಳು, ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶೇಷಾದ್ರಿಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಮಾರ್ಚ್ 1ರಿಂದ ಪ್ರಕರಣದ ತನಿಖೆ ಆರಂಭಿಸಿದ್ದರು. ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕಲಬುರಗಿ ಜಿಲ್ಲೆಯ 25, ಹಾಸನದ 12, ವಿಜಯಪುರದ ಇಬ್ಬರು, ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರ ಜಿಲ್ಲೆಯ ತಲಾ ಒಬ್ಬರು ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ. ಇನ್ನೂ 12 ಜಿಲ್ಲೆಗಳ 62 ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿರುವ ಮಾಹಿತಿಯಿದ್ದು, ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.

ಏನಿದು ಪ್ರಕರಣ?: ಜಲ ಸಂಪನ್ಮೂಲ ಇಲಾಖೆಯಲ್ಲಿ ಬ್ಯಾಕ್‌ಲಾಗ್ ಕೋಟಾದಡಿ ಖಾಲಿ ಇದ್ದ ದ್ವಿತೀಯ ದರ್ಜೆ ಸಹಾಯಕರ 182 ಹುದ್ದೆಗಳ ಭರ್ತಿಗೆ 2022ರ ಅಕ್ಟೋಬರ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದವರಲ್ಲಿ 62 ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ್ದ ಅರ್ಹತೆ ಹೊಂದಿಲ್ಲದಿದ್ದರೂ ನಕಲಿ ದಾಖಲೆಗಳನ್ನು ಸಲ್ಲಿಸಿ ಹುದ್ದೆ ಪಡೆಯಲು ಪ್ರಯತ್ನಿಸಿದ್ದರು. ನಕಲಿ ಅಂಕಪಟ್ಟಿ ತಯಾರಿಸುವ ಜಾಲವೊಂದರ ನೆರವಿನಲ್ಲಿ ಈ ಕೃತ್ಯ ಎಸಗಿದ್ದರು ಎಂದು ಪೊಲೀಸರು ಹೇಳಿದರು.

ದ್ವಿತೀಯ ಪಿಯು, 12ನೇ ತರಗತಿಯ ಸಿಬಿಎಸ್‌ಸಿ ಹಾಗೂ ದ್ವಿತೀಯ ಪಿಯುಸಿಗೆ ತತ್ಸಮಾನವಾದ ವಿದ್ಯಾರ್ಹತೆಯುಳ್ಳ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಲಾಗಿತ್ತು. ಅವುಗಳನ್ನು ಆನ್‌ಲೈನ್‌ ಮೂಲಕ ಜಲ ಸಂಪನ್ಮೂಲ ಇಲಾಖೆಯ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು. ಅಕ್ರಮ ನಡೆದಿರುವ ಸುಳಿವು ದಾಖಲಾತಿ ಪರಿಶೀಲನೆ ವೇಳೆ ಲಭಿಸಿತ್ತು. ಆಗ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯಿಂದ ಅಕ್ರಮ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ನಕಲಿ ಅಂಕಪಟ್ಟಿ ಸೃಷ್ಟಿಜಾಲ: ‘10 ಮಂದಿ ಮಧ್ಯವರ್ತಿಗಳು ಬಾಡಿಗೆಗೆ ಮಳಿಗೆ ಪಡೆದು ಅಲ್ಲಿ ಕಂಪ್ಯೂಟರ್‌ ನೆರವಿನಿಂದ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದರು. ಮೂವರು ಸರ್ಕಾರಿ ನೌಕರರು, ಅಭ್ಯರ್ಥಿಗಳನ್ನು ಹುಡುಕಿ ಮಧ್ಯವರ್ತಿಗಳ ಬಳಿಗೆ ಕಳುಹಿಸುತ್ತಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಲೆಮರೆಸಿಕೊಂಡ 25 ಮಂದಿ

ನಕಲಿ ಅಂಕಪಟ್ಟಿ ಮತ್ತು ದಾಖಲೆಗಳನ್ನು ತಯಾರಿಸಿ ಸಲ್ಲಿಸಿದ್ದ ಪ್ರಕರಣದಲ್ಲಿ ಇನ್ನೂ 25 ಮಂದಿ ಭಾಗಿಯಾಗಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಬಂಧಿತ ಅಭ್ಯರ್ಥಿಗಳ ಪೈಕಿ ಬಹುತೇಕರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅನುತ್ತೀರ್ಣಗೊಂಡಿದ್ದರು. ಕೆಲವರು ಕಡಿಮೆ ಅಂಕಗಳಿಸಿದ್ದರು. ಸರ್ಕಾರಿ ಹುದ್ದೆ ಪಡೆಯಲು ನಕಲಿ ಅಂಕಪಟ್ಟಿ ಪಡೆದುಕೊಂಡಿದ್ದರು. ಒಂದು ನಕಲಿ ಅಂಕಪಟ್ಟಿಗೆ ₹5 ಸಾವಿರದಿಂದ  ₹6 ಸಾವಿರ ಪಡೆಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.