ಬೆಂಗಳೂರು: ಹಣ ಹಾಗೂ ಆಸ್ತಿಗೋಸ್ಕರ ಚಿಕ್ಕಮ್ಮನ ಕೊಲೆಗೆ ಯತ್ನಿಸಿದ ಸಾಕು ಮಗಳು ಹಾಗೂ ಅಳಿಯನನ್ನು ಆರ್.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಣ್ಣಮ್ಮ (56) ಹಲ್ಲೆಗೆ ಒಳಗಾದ ಮಹಿಳೆ. ಸುಮಿತ್ರಾ (37) ಹಾಗೂ ಮುನಿರಾಜ್ (38) ಬಂಧಿತ ಆರೋಪಿಗಳು.
ಬಂಧಿತರಿಂದ ₹8.7 ಲಕ್ಷ ಮೌಲ್ಯದ 78 ಗ್ರಾಂ ಚಿನ್ನಾಭರಣ ಹಾಗೂ 130 ಗ್ರಾಂ ಬೆಳ್ಳಿ ಸಾಮಗ್ರಿ, ₹4.12 ಲಕ್ಷ ನಗದು ಹಾಗೂ ಒಂದು ವಾಚ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಅಣ್ಣಮ್ಮ ಅವರು ತನ್ನ ಅಕ್ಕನ ಮಗಳಾದ ಸುಮಿತ್ರಾ ಎಂಬಾಕೆಯನ್ನು ಚಿಕ್ಕಂದಿನಿಂದಲೂ ತಾವೇ ಪೋಷಣೆ ಮಾಡಿದ್ದರು. ಆಕೆಯನ್ನು ಮುನಿರಾಜ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಆರ್‌ಎಂಸಿ ಯಾರ್ಡ್‌ನಲ್ಲಿ ಮುನಿರಾಜ್ ಕೆಲಸ ಮಾಡಿಕೊಂಡಿದ್ದ. ಮಾಲೀಕರು ಸಂಬಳ ನೀಡುತ್ತಿಲ್ಲವೆಂದು ಅಣ್ಣಮ್ಮನ ಬಳಿ ಹೇಳಿಕೊಂಡಿದ್ದ. ಮಾಲೀಕರಿಂದ ಸಂಬಳ ಕೊಡಿಸುವಂತೆಯೂ ಮನವಿ ಮಾಡಿದ್ದ. ಅಣ್ಣಮ್ಮ ಅವರನ್ನು ಆರ್‌ಎಂಸಿ ಯಾರ್ಡ್‌ಗೆ ರಾತ್ರಿ ವೇಳೆ ಕರೆದೊಯ್ದಿದ್ದ ಸಾಕು ಮಗಳು, ಅಲ್ಲೇ ಬಿಟ್ಟು ಹೋಗಿದ್ದಳು. ಅಲ್ಲಿ ಆಕೆಗೆ ಮುನಿರಾಜ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ’ ಎಂದು ಪೊಲೀಸರು.
‘ಅಣ್ಣಮ್ಮ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದು ನೋಡುವಷ್ಟರಲ್ಲಿ ಚಿನ್ನ ಹಾಗೂ ನಗದು ಕಳವು ನಡೆದಿತ್ತು. ಹಣ ಕಳೆದುಕೊಂಡ ಮಹಿಳೆ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಅಣ್ಣಮ್ಮ ಅವರಿಗೆ ಯಶವಂತಪುರದಲ್ಲಿ ಸ್ವಂತ ಮನೆಯಿದ್ದು ಅದರಿಂದ ಬಾಡಿಗೆ ಹಣ ಬರುತ್ತಿತ್ತು. ಸಾಕು ಮಗಳು ಹಾಗೂ ಅಳಿಯ ಕೆಲವು ದಿನಗಳ ಹಿಂದೆ ಅಣ್ಣಮ್ಮನ ಮನೆಗೆ ಬಂದು ವಾಸವಿದ್ದರು. ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಇರುವುದನ್ನು ಆರೋಪಿಗಳು ಗಮನಿಸಿ ಈ ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.