ADVERTISEMENT

ನಾಯಿಗೆ ಊಟ ಹಾಕುವ ವೇಳೆ ಮಹಿಳೆ ಮೇಲೆ ಹಲ್ಲೆಗೆ ಯತ್ನ: ‌ನಾಲ್ವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:43 IST
Last Updated 7 ನವೆಂಬರ್ 2024, 15:43 IST
<div class="paragraphs"><p> ನಾಯಿ</p></div>

ನಾಯಿ

   

ಬೆಂಗಳೂರು: ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂಬ ಆರೋಪದ ಅಡಿ ನಾಲ್ವರ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣಾ ವ್ಯಾಪ್ತಿಯ ಬಸವನಗರ ನಿವಾಸಿ ಆ್ಯನಿ ಕೆ. ಜಾರ್ಜ್‌ ಅವರು ನೀಡಿರುವ ದೂರಿನ ಮೇರೆಗೆ ಗುರುರಾಜ ಲೇಔಟ್‌ನ ನಿವಾಸಿ ನಂದಿನಿ, ಅವರ ಪತಿ, ಸಿಂಧು ಹಾಗೂ ಅವರ ಪತಿ ಮತ್ತು ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

‘ಇದು ಠಾಣಾ ಜಾಮೀನು ಪ್ರಕರಣವಾಗಿದ್ದು, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

‘ಗುರುರಾಜ ಲೇಔಟ್‌ನ ಆರನೇ ಕ್ರಾಸ್‌ನಲ್ಲಿ ನಾಲ್ಕು ನಾಯಿಗಳಿಗೆ ರಾತ್ರಿ ವೇಳೆ ಪ್ರತಿನಿತ್ಯ ಊಟ ಹಾಕುತ್ತಿದ್ದೆ. ಕಳೆದ ಹತ್ತು ವರ್ಷಗಳಿಂದ ಪ್ರತಿನಿತ್ಯ ರಾತ್ರಿ 9.30ರ ಸುಮಾರಿಗೆ ಊಟ ಹಾಕಲು ಹೋಗುತ್ತಿದ್ದೆ. ಮಂಗಳವಾರವೂ ಊಟ ಹಾಕಲು ತೆರಳಿದ್ದೆ.ಅದೇ ವೇಳೆ ಕಪ್ಪುಬಣ್ಣದ ಟೀ ಶರ್ಟ್‌ ಹಾಗೂ ಕಪ್ಪು ಬಣ್ಣದ ಲುಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಬೈಕ್‌ ಕೀ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ. ಮೊಬೈಲ್‌ ಕಸಿದು ಕೆಳಕ್ಕೆ ಎಸೆದ’ ಎಂದು ಆ್ಯನಿ ಅವರು ನೀಡಿರುವ ದೂರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಗೂ ಯತ್ನ: ‘ಸ್ಥಳದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಕೋಲನ್ನು ತೆಗೆದುಕೊಂಡು ಹಲ್ಲೆ ನಡೆಸಲು ಆರೋಪಿಗಳು ಮುಂದಾಗಿದ್ದರು. ಇನ್ನು ಮುಂದೆ ಬೀದಿ ನಾಯಿಗಳಿಗೆ ಆಹಾರ ಹಾಕಿದರೆ ಹಲ್ಲೆ ಮಾಡುತ್ತೇವೆ. ನಾಯಿಗಳಿಗೂ ಹೊಡೆಯುತ್ತೇವೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ದೂರಿದ್ದಾರೆ.

‘ಬೈಕ್‌ ಕೀ ಕಸಿದುಕೊಂಡ ವ್ಯಕ್ತಿ ಜತೆಗೆ ಸೇರಿಕೊಂಡು ನಂದಿನಿ, ಸಿಂಧು ಅವರೂ ನನಗೆ ಬೆದರಿಕೆ ಹಾಕಿದರು‘ ಎಂದು ದೂರಿನಲ್ಲಿ ಆ್ಯನಿ ವಿವರಿಸಿದ್ದಾರೆ.

ಬಿಬಿಎಂಪಿ ವಿರುದ್ಧ ಆಕ್ರೋಶ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಬೀದಿ ನಾಯಿಗಳನ್ನು ಬಿಬಿಎಂಪಿ ನಿಯಂತ್ರಿಸುತ್ತಿಲ್ಲ. ಸುಂಕದಕಟ್ಟೆ, ಪೀಣ್ಯ, ಗಂಗಮ್ಮನಗುಡಿ ವೃತ್ತ, ಎಂ.ಎಸ್‌. ಪಾಳ್ಯ ರಸ್ತೆ, ಜಾಲಹಳ್ಳಿ ಕ್ರಾಸ್, ಎಸ್‌.ಎಂ.ರಸ್ತೆ, ಪೈಪ್‌ಲೈನ್‌ ರಸ್ತೆ, ದಾಸರಹಳ್ಳಿ, ಹೆಸರಘಟ್ಟ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗಿದೆ. ಸಂಜೆ ಹಾಗೂ ರಾತ್ರಿ ವೇಳೆ ವೃದ್ಧರು ಹಾಗೂ ಮಕ್ಕಳು ಓಡಾಟ ನಡೆಸುವುದಕ್ಕೆ ಭಯಪಡುವ ಪರಿಸ್ಥಿತಿಯಿದೆ. ಬೀದಿ ನಾಯಿಗಳನ್ನು ನಿಯಂತ್ರಿಸಿದರೆ ಈ ರೀತಿಯ ಗಲಾಟೆಗಳೂ ನಡೆಯುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆಗಸ್ಟ್‌ 28ರಂದು ಗಂಗಮ್ಮನಗುಡಿ ವೃತ್ತದ ಬಳಿಯ ವಾಯುಸೇನೆಯ ಏಳನೇ ವಸತಿ ಕ್ಯಾಂಪ್‌ ಆವರಣದಲ್ಲಿ ವಾಯುವಿಹಾರ ನಡೆಸುತ್ತಿದ್ದ ವೃದ್ಧೆಯೊಬ್ಬರ ಮೇಲೆ 12ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದ್ದರಿಂದ ಅವರು ಮೃತಪಟ್ಟಿದ್ದರು. ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳೂ ನಗರದಲ್ಲಿ ವರದಿ ಆಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.