ADVERTISEMENT

ಅತ್ತಿಬೆಲೆ ಪಟಾಕಿ ದುರಂತ: ಅಕ್ರಮ ಪರವಾನಗಿ– ಲಂಚದ ಆಸೆಗೆ ‘ಎನ್‌ಒಸಿ’ ಮಾರಾಟ?

* ಲೋಪವಿದ್ದರೂ ಲೈಸೆನ್ಸ್‌ಗೆ ಶಿಫಾರಸು * 1 ಸಾವಿರ ಕೆ.ಜಿ ಪಟಾಕಿ ಸಂಗ್ರಹಕ್ಕೆ ಅನುಮತಿ ನೀಡಿದ್ದ ಜಿಲ್ಲಾಧಿಕಾರಿ

ಸಂತೋಷ ಜಿಗಳಿಕೊಪ್ಪ
Published 8 ಅಕ್ಟೋಬರ್ 2023, 23:29 IST
Last Updated 8 ಅಕ್ಟೋಬರ್ 2023, 23:29 IST
ಪಟಾಕಿ ದುರಂತ ಸಂಭವಿಸಿದ್ದ ಅತ್ತಿಬೆಲೆಯ ಶ್ರೀ ಬಾಲಾಜಿ ಟ್ರೇಡರ್ಸ್ ಮಳಿಗೆ ಎದುರು ಸುಟ್ಟು ಕರಕಲಾದ ಅವಶೇಷಗಳು – ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಪಟಾಕಿ ದುರಂತ ಸಂಭವಿಸಿದ್ದ ಅತ್ತಿಬೆಲೆಯ ಶ್ರೀ ಬಾಲಾಜಿ ಟ್ರೇಡರ್ಸ್ ಮಳಿಗೆ ಎದುರು ಸುಟ್ಟು ಕರಕಲಾದ ಅವಶೇಷಗಳು – ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಪಟಾಕಿ ದುರಂತ ಸಂಭವಿಸಿರುವ ಅತ್ತಿಬೆಲೆಯ ‘ಶ್ರೀ ಬಾಲಾಜಿ ಟ್ರೇಡರ್ಸ್’ ಮಳಿಗೆಯಲ್ಲಿ ಸಾಕಷ್ಟು ಲೋಪಗಳಿದ್ದರೂ ಅಕ್ರಮವಾಗಿ ಪರವಾನಗಿ ನೀಡಿದ್ದ ಸಂಗತಿ ಪೊಲೀಸರ ವಿಶೇಷ ತಂಡದ ತನಿಖೆಯಿಂದ ಗೊತ್ತಾಗಿದೆ.

ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿರುವ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ‘ಶ್ರೀ ಬಾಲಾಜಿ ಟ್ರೇಡರ್ಸ್’ ಮಳಿಗೆ ಹಾಗೂ ಗೋದಾಮು ತೆರೆಯಲಾಗಿತ್ತು. ಉದ್ಯಮಿ ನವೀನ್ ರೆಡ್ಡಿ ತನ್ನ ಹಾಗೂ ತಂದೆ ರಾಮಸ್ವಾಮಿ ರೆಡ್ಡಿ ಅವರ ಹೆಸರಿನಲ್ಲಿ ಪಟಾಕಿ ವ್ಯವಹಾರ ನಡೆಸಲು ಪರವಾನಗಿ ಪಡೆದಿದ್ದರು.

ತಾತ್ಕಾಲಿಕವಾಗಿ ಪರವಾನಗಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಹಲವು ದಿನಗಳಿಂದ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಪರವಾನಗಿ ನೀಡುವಾಗ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಠಾಣೆ, ಬೆಸ್ಕಾಂ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಜೊತೆಗೆ, ಸ್ಥಳದ ಸುರಕ್ಷತೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ನೀಡಿದ ವರದಿ ಅನ್ವಯ ಪ್ರಕ್ರಿಯೆ ಮುಂದುವರಿಸಲು ನಿಯಮವಿದೆ. ಈ ನಿಯಮಗಳನ್ನು ಗಾಳಿಗೆ ತೂರಿರುವ ರಾಮಸ್ವಾಮಿ ರೆಡ್ಡಿ– ನವೀನ್ ರೆಡ್ಡಿ, ಎಲ್ಲ ಇಲಾಖೆಗಳಿಂದ ಎನ್‌ಒಸಿ ಪಡೆದು ಅಕ್ರಮವಾಗಿ ಪರವಾನಗಿ ಪಡೆದುಕೊಂಡಿದ್ದಾರೆ. ಕೆಲ ಅಧಿಕಾರಿಗಳು, ಲಂಚದ ಆಸೆಗಾಗಿ ‘ಎನ್‌ಒಸಿ’ ಮಾರಾಟ ಮಾಡಿರುವ ಆರೋಪವೂ ಕೇಳಿಬರುತ್ತಿದೆ.

ADVERTISEMENT

‘ಮಳಿಗೆ ಅಕ್ಕ–ಪಕ್ಕದಲ್ಲಿ ಹೋಟೆಲ್–ಬಾರ್ ಆ್ಯಂಡ್ ರೆಸ್ಟೋರೆಂಟ್ ಇದೆ. ಬೀಡಿ ಅಂಗಡಿಗಳೂ ಇವೆ. ಇದೇ ಸ್ಥಳದಲ್ಲಿ ಪಟಾಕಿ ಮಳಿಗೆಗೆ ಪರವಾನಗಿ ನೀಡಲಾಗಿದೆ. ಮಾಲೀಕರಿಗೆ ಸ್ಥಳೀಯ ಅಧಿಕಾರಿಗಳ ಬೆಂಬಲವೂ ಇತ್ತು’ ಎಂದು ಅತ್ತಿಬೆಲೆಯಲ್ಲಿರುವ ಪಟಾಕಿ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರಾಟಕ್ಕೆ ಮಾತ್ರ ಪರವಾನಗಿ ಪಡೆದಿರುವ ಮಾಲೀಕರು, ದೊಡ್ಡ ಬಾಕ್ಸ್‌ಗಳಲ್ಲಿರುತ್ತಿದ್ದ ಪಟಾಕಿಗಳನ್ನು ಸಣ್ಣ ಬಾಕ್ಸ್‌ಗಳಲ್ಲಿ ಇರಿಸಿ ರೀ ಪ್ಯಾಕಿಂಗ್‌ ಸಹ ಮಾಡುತ್ತಿದ್ದರು. ಇದಕ್ಕಾಗಿ ತಮಿಳುನಾಡಿನ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದರು’ ಎಂದರು. 

‘ಲಕ್ಷ ಲಕ್ಷ ಹಣ ನೀಡಿದವರಿಗಷ್ಟೇ ಪಟಾಕಿ ಮಳಿಗೆ ತೆರೆಯಬಹುದೆಂಬ ಸ್ಥಿತಿ ಇದೆ. ಕೆಲ ಅಧಿಕಾರಿಗಳು ಒಂದು ಎನ್ಒಸಿಗೆ ₹ 50 ಸಾವಿರದಿಂದ ₹ 1 ಲಕ್ಷದವರೆಗೂ ಪಡೆಯುತ್ತಾರೆ. ಎಲ್ಲರಿಗೂ ಹಣ ಕೊಟ್ಟು ಪರವಾನಗಿ ಪಡೆದು ವ್ಯಾಪಾರ ಮಾಡಬೇಕು. ವ್ಯಾಪಾರ ಆಗದಿದ್ದರೆ, ನಷ್ಟ ಖಚಿತ. ಲಂಚಕ್ಕೆ ಹೆದರಿ ಈ ವರ್ಷ ಪಟಾಕಿ ಅಂಗಡಿ ಮುಚ್ಚಿದ್ದೇನೆ’ ಎಂದು ಹೇಳಿದರು.

ಎರಡು ಪರವಾನಗಿ: ಶ್ರೀ ಬಾಲಾಜಿ ಟ್ರೇಡರ್ಸ್ ಹೆಸರಿನಲ್ಲಿ ಪಟಾಕಿ ವ್ಯವಹಾರ ನಡೆಸಲು ಎರಡು ಪ್ರತ್ಯೇಕ ಪರವಾನಗಿ ನೀಡಲಾಗಿದೆ. 2021ರ ಜನವರಿ 18ರಿಂದ 2026ರ ಜನವರಿ 28ರವರೆಗಿನ ಅವಧಿಗೆ ಒಂದು, 2023ರ ಸೆಪ್ಟೆಂಬರ್ 13ರಿಂದ 2028ರ ಅಕ್ಟೋಬರ್ 31ರವರೆಗಿನ ಅವಧಿಗೆ ಮತ್ತೊಂದು ಪರವಾನಗಿ ನೀಡಲಾಗಿದೆ. ಒಂದೇ ಮಳಿಗೆಗೆ ಎರಡು ಪರವಾನಗಿ ನೀಡಿರುವುದು ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಎಚ್‌ಎಸ್‌ಆರ್ ಲೇಔಟ್ ನಿವಾಸಿ ಜಯಮ್ಮ ಹಾಗೂ ಅವರ ಮಗ ಅನಿಲ್ ರೆಡ್ಡಿ ಹೆಸರಿನಲ್ಲಿ ಜಾಗವಿದೆ. ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದ ರಾಮಸ್ವಾಮಿ ಹಾಗೂ ನವೀನ್, ಮಳಿಗೆಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರೆಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಮಳಿಗೆ ವಿನ್ಯಾಸ ಅವೈಜ್ಞಾನಿಕ: ‘ಮಳಿಗೆಯ ವಿನ್ಯಾಸವೇ ಅವೈಜ್ಞಾನಿಕವಾಗಿದ್ದು, ಇದರಿಂದಾಗಿಯೇ ಮಳಿಗೆಯಿಂದ ಹೊರಬರಲಾಗದೇ ಕೆಲ ಕಾರ್ಮಿಕರು ಮೃತಪಟ್ಟಿರುವುದಾಗಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಿಮೆಂಟ್ ಬ್ರಿಕ್ಸ್‌ಗಳನ್ನು ಬಳಸಿ ಸುತ್ತಲು ಗೋಡೆಗಳನ್ನು ನಿರ್ಮಿಸಿ, ಚಾವಣಿಯಲ್ಲಿ ತಗಡಿನ ಶೀಟ್‌ಗಳನ್ನು ಹಾಕಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಕಡೆ ಒಂದೇ ಶಟರ್ ಇತ್ತು. ಹಿಂಭಾಗದಲ್ಲಿ ಸಣ್ಣದೊಂದು ಬಾಗಿಲು ಇದ್ದರೂ ಅದನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಉಳಿದಂತೆ ಅಂಗಡಿಯೊಳಗೆ ಕಪಾಟುಗಳನ್ನು ನಿರ್ಮಿಸಿ, ಎಲ್ಲ ಕಡೆಯೂ ಪಟಾಕಿ ಬಾಕ್ಸ್‌ಗಳನ್ನು ಸಂಗ್ರಹಿಸಿಡಲಾಗಿತ್ತು’ ಎಂದು ಅವರು ತಿಳಿಸಿದರು.

‘ತುರ್ತು ಸಂದರ್ಭದಲ್ಲಿ ಹೊರಗೆ ಹೋಗಲು ಶಟರ್ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಶನಿವಾರ ಶಟರ್‌ ಭಾಗದಿಂದಲೇ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ, ಕಾರ್ಮಿಕರು ಹೊರಗೆ ಬರಲು ಸಾಧ್ಯವಾಗದೇ ಒಳಗೆ ಸಿಲುಕಿ ಮೃತಪಟ್ಟಿದ್ದಾರೆ’ ಎಂದು ಹೇಳಿದರು.

ಸುಮಾರು 10 ಟನ್‌ ಪಟಾಕಿ ಸಂಗ್ರಹ: ‘1,000 ಕೆ.ಜಿ ಪಟಾಕಿ ಸಂಗ್ರಹಿಸಲು ಮಾತ್ರ ಜಿಲ್ಲಾಧಿಕಾರಿಯು ಮಾಲೀಕರಿಗೆ ಪರವಾನಗಿ ನೀಡಿದ್ದರು. ಆದರೆ, ಮಳಿಗೆಯಲ್ಲಿ ಸುಮಾರು 10 ಟನ್‌ ಪಟಾಕಿ ಸಂಗ್ರಹಿಸಿಡಲಾಗಿತ್ತೆಂಬ ಮಾಹಿತಿ ಲಭ್ಯವಾಗಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.

ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘10x10 ಅಡಿ ಜಾಗದಲ್ಲಿ ಮಾತ್ರ ಪಟಾಕಿ ಸಂಗ್ರಹಕ್ಕೆ ಅನುಮತಿ ಇದೆ. ಆದರೆ, 40 x 150 ಅಡಿ ಜಾಗದಲ್ಲಿ ಬಾಲಾಜಿ ಟ್ರೇಡರ್ಸ್ ಮಳಿಗೆ ಇತ್ತು. ಜೊತೆಗೆ, ಅದರಲ್ಲೇ ಗೋದಾಮು ಮಾಡಲಾಗಿತ್ತು. 30 ಕಾರ್ಮಿಕರು ಕೆಲಸ ಮಾಡುತ್ತಿದ್ದು. ಮಳಿಗೆ ಎದುರು ವಿದ್ಯುತ್ ತಂತಿ ಇತ್ತು. ಎಲ್ಲ ಸಂಗತಿಗಳನ್ನು ಗಮನಿಸಿದಾಗ ಇದೊಂದು ಅಕ್ರಮ ಮಳಿಗೆ ಎಂಬುದು ಗೊತ್ತಾಗುತ್ತದೆ’ ಎಂದು ತಿಳಿಸಿದರು.

ಅನುಮತಿ ನೀಡಿರುವ ಪರವಾನಗಿ ಹಾಗೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಪರವಾನಗಿ ಮಾಹಿತಿ ಬೇರೆ ಬೇರೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು.ಜಿಲ್ಲಾಧಿಕಾರಿ
–ಕೆ.ಎ. ದಯಾನಂದ್ ಬೆಂಗಳೂರು ನಗರ

‘ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ’

ಅತ್ತಿಬೆಲೆ ಪಟಾಕಿ ದುರಂತಕ್ಕೆ ಸ್ಥಳೀಯ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಣಕ್ಕಾಗಿ ಅಕ್ರಮ ಲೈಸೆನ್ಸ್‌ ಕೊಡುವುದು, ಅಕ್ರಮವಾಗಿ ಶೇಖರಣೆಗೆ ಅವಕಾಶ ಮಾಡಿ
ಕೊಟ್ಟಿರುವುದರಿಂದ ದೊಡ್ಡ ದುರಂತ ಆಗಿದೆ. ತಪ್ಪಿತಸ್ಥ ಅಧಿಕಾರಿ
ಗಳ ಮೇಲೆ ಕ್ರಮ ಕೈಗೊಂಡರೆ ಅನಾಹುತಗಳು ತಪ್ಪಲಿವೆ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಪಟಾಕಿ ನಿರ್ವಹಣೆಯ ನಿಯಮಗಳ ಪಾಲನೆ ಆಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಇಷ್ಟು ದೊಡ್ಡ ದುರಂತ ಆಗಿದ್ದು, ಸರ್ಕಾರ ಕಣ್ತೆರೆಯದಿದ್ದರೆ ಇನ್ನಷ್ಟು ದುರಂತಗಳು ನಡೆಯಲಿವೆ ಎಂದರು.

‘ತನಿಖೆಯಾದರೆ ಅಧಿಕಾರಿಗಳ ಲಂಚಾವತಾರ ಬಯಲು’

‘ಅತ್ತಿಬೆಲೆ ಸುತ್ತಮುತ್ತ 500 ಕ್ಕೂ ಹೆಚ್ಚು ಪಟಾಕಿ ಅಂಗಡಿಗಳಿವೆ. ನಿಯಮಬದ್ಧವಾಗಿ ಮಳಿಗೆ ತೆರೆಯಲು ಸಾಧ್ಯವೇ ಇಲ್ಲ. ಎಲ್ಲರೂ ಲಂಚ ಕೊಟ್ಟೇ ಪರವಾನಗಿ ಪಡೆದುಕೊಂಡಿದ್ದಾರೆ. ಸೂಕ್ತ ತನಿಖೆ ನಡೆದರೆ ಅಧಿಕಾರಿಗಳ ಲಂಚಾವತಾರ ಹೊರಕ್ಕೆ ಬರುತ್ತದೆ’ ಎಂದು ಸ್ಥಳೀಯ ವ್ಯಾಪಾರಿ ‘ಪ್ರಜಾವಾಣಿ’ಗೆ ಹೇಳಿದರು. ‘ಬೆಂಕಿ ದುರಂತ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದು ಸೂಕ್ತ. ಅಗ್ನಿಶಾಮಕ ದಳ ಸ್ಥಳೀಯ ಪೊಲೀಸ್ ಠಾಣೆ ಬೆಸ್ಕಾಂ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕು. ಆಗ ಬಡ ಕಾರ್ಮಿಕರ ಸಾವಿಗೆ ನ್ಯಾಯ ಸಿಗುತ್ತದೆ’ ಎಂದರು.

‘ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ‘

‘ಪಟಾಕಿ ಮಳಿಗೆ ತೆರೆಯಲು ಪಡೆದಿದ್ದ ಪರವಾನಗಿ ಹಾಗೂ ಅದನ್ನು ನೀಡಲು ಅನುಸರಿಸಿದ್ದ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಲಾಗುವುದು. ಪೊಲೀಸ್‌ ಕಂದಾಯ ಅಗ್ನಿಶಾಮಕ ಪುರಸಭೆ ಹಾಗೂ ಇತರೆ ಯಾರೇ ಅಧಿಕಾರಿಗಳು ತಪ್ಪು ಎಸಗಿದ್ದು ಕಂಡುಬಂದರೆ ಅವರೆಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್  ಹೇಳಿದರು. ಘಟನಾ ಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅಕ್ರಮವಾಗಿ ಗೋದಾಮು ತೆರೆದಿದ್ದರು ಎಂಬುದು ಪ್ರಾಥಮಿಕವಾಗಿ ಕಂಡುಬರುತ್ತಿದೆ. ಯಾವೆಲ್ಲ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು ಎಂಬ ಮಾಹಿತಿ ಕಲೆಹಾಕಲಾಗುವುದು’ ಎಂದರು.

ಸುರಕ್ಷತಾ ಕ್ರಮವಿಲ್ಲದ ಗೋದಾಮು: ಸಿ.ಎಂ ‘ಗೋದಾಮಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಪರವಾನಗಿ ಪಡೆದಿದ್ದವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಘಟನಾ ಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ನಿರಾಕ್ಷೇಪಣಾ ಪತ್ರ ಪಡೆದು ಪರವಾನಗಿ ನೀಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿಯವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಬೇಕಾಗಿತ್ತು. ನಿರಾಕ್ಷೇಪಣಾ ಪತ್ರ ನೀಡಿದವರು ಸಹ ’ನಿಯಮಗಳ ಅನ್ವಯ ಮಳಿಗೆ ಇದೆಯೇ’ ಎಂಬುದನ್ನು ಪರಿಶೀಲಿಸಬೇಕಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.