ಬೆಂಗಳೂರು: ‘ಕನ್ನಡದಲ್ಲಿ ಲೇಖಕರು ತಮ್ಮ ಕೃತಿಗಳ ವಸ್ತುನಿಷ್ಠ ವಿಮರ್ಶೆಯನ್ನು ಸ್ವೀಕರಿಸುತ್ತಿಲ್ಲ’ ಎಂದು ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಪತ್ರಿಕೆಯ ಸಂಪಾದಕ ಟಿ.ಎಸ್. ಗೊರವರ ಅಭಿಪ್ರಾಯಪಟ್ಟರು.
ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಭಾನುವಾರ ನಡೆದ ‘ಕನ್ನಡದಲ್ಲಿ ಕಿರುಪತ್ರಿಕೆಗಳು’ ಗೋಷ್ಠಿಯಲ್ಲಿ ಲೇಖಕ ವಿವೇಕ ಶಾನಭಾಗ ಅವರ ‘ಇಂದಿನ ವಾತಾವರಣದಲ್ಲಿ ವಸ್ತುನಿಷ್ಠ ವಿಮರ್ಶೆ ಕಡಿಮೆಯಾಗುತ್ತಿದೆಯೇ’ ಪ್ರಶ್ನೆಗೆ ಉತ್ತರಿಸಿದ ಅವರು, ‘ವಸ್ತುನಿಷ್ಠ ವಿಮರ್ಶೆ ಕಡಿಮೆಯಾಗುತ್ತಿದೆ ಅನ್ನುವುದಕ್ಕಿಂತ. ಅಂಥ ವಿಮರ್ಶೆಯನ್ನು ಲೇಖಕರು ಸ್ವೀಕರಿಸುತ್ತಿಲ್ಲ. ಬಹುತೇಕ ಲೇಖಕರಲ್ಲಿ ನಿಷ್ಠುರವಾದ ವಿಮರ್ಶೆಯನ್ನು ತಾಳಿಕೊಳ್ಳುವ ಸಹನೆಯ ಗುಣವೇ ಇಲ್ಲದಂತಾಗಿದೆ. ಪಿ. ಲಂಕೇಶ್ ಅವರ ಕಾಲಘಟ್ಟದಲ್ಲಿ ಬಂದಂಥ ಕಟುವಿಮರ್ಶೆಯನ್ನು ಈ ಕಾಲಘಟ್ಟದಲ್ಲಿ ಮಾಡಿ ದಕ್ಕಿಸಿಕೊಳ್ಳುವುದು ಕಷ್ಟ’ ಎಂದರು.
‘ನಮ್ಮ ಪತ್ರಿಕೆಗೆ ಒಬ್ಬರು ವಾಟ್ಸ್ಆ್ಯಪ್ ಮೂಲಕ ಪುಸ್ತಕವೊಂದರ ವಿಮರ್ಶೆ ಕಳಿಸಿದ್ದರು. ಅದರ ಬೆನ್ನಲ್ಲೇ ಪರಿಚಿತ ಹಿರಿಯರೊಬ್ಬರಿಂದ ಕರೆಯೂ ಬಂದಿತು. ವಿಮರ್ಶೆ ಓದಿದ ಬಳಿಕ ಪುಸ್ತಕದ ಮುಖಪುಟದ ಚಿತ್ರವನ್ನು ಕಳಿಸಲು ತಿಳಿಸಿದೆ. ಸೋಜಿಗವೆಂದರೆ ಇನ್ನೂ ಆ ಪುಸ್ತಕವೇ ಪ್ರಕಟವಾಗಿರಲಿಲ್ಲ. ಆದರೆ, ವಿಮರ್ಶೆ ಬಂದಿತ್ತು. ಬರಹ ಅನ್ನುವುದು ಲೇಖಕನ ಒಳಗಿನ ತುಡಿತ. ಆದರೆ, ಈಚೆಗೆ ಲೇಖಕರು ಕೀರ್ತಿ, ಪ್ರಶಸ್ತಿಗಳನ್ನೇ ಹೆಚ್ಚು ಬಯಸುತ್ತಿದ್ದಾರೆ. ವಸ್ತುನಿಷ್ಠ ವಿಮರ್ಶೆಯೂ ಬೇಡವಾಗಿದೆ’ ಎಂದರು.
ಪ್ರತಿಕ್ರಿಯಿಸಿದ ‘ಬಹುವಚನ’ ಕಿರುಪತ್ರಿಕೆಯ ಸಂಪಾದಕ, ಪ್ರಾಧ್ಯಾಪಕ ಸಿರಾಜ್ ಅಹಮದ್ ಅವರು, ‘ವಿಮರ್ಶೆ ಅನ್ನುವ ಪ್ರಕಾರವೇ ದಿವಂಗತವಾಗಿದೆ. ವಿಮರ್ಶೆಯ ಮರಣವನ್ನು ವಿಮರ್ಶಕರೇ ತುದಿಗಾಲಿನಲ್ಲಿ ನಿಂತು ಘೋಷಿಸಿರಬಹುದು. ಅದಕ್ಕೆ ಸಕಾರಣವೂ ಇರಬಹುದು. ಆದರೆ ಇಂದು ವಸ್ತುನಿಷ್ಠ ವಿಮರ್ಶೆಯನ್ನು ಬರೆಯಲು ಯಾರೂ ತಯಾರಿಲ್ಲ’ ಎಂದು ವಿಷಾದಿಸಿದರು.
ಆಯೋಜಕರಿಗೆ ತರಾಟೆ: ಗೋಷ್ಠಿಯ ಆರಂಭ ಹಾಗೂ ಮಧ್ಯದಲ್ಲಿ ಸಭಾಂಗಣದ ಮತ್ತೊಂದು ಮೂಲೆಯಿಂದ ಜನರ ಗುಸುಗುಸು ಶಬ್ದ ಕೇಳಿ ಲೇಖಕ ವಿವೇಕ ಶಾನಭಾಗ ಗರಂ ಆದರು. ‘ಜನರನ್ನು ಅಲ್ಲಿಂದ ಕಳಿಸಿ’ ಎಂದರು. ಕೆಲ ಹೊತ್ತಿನ ಬಳಿಕ ಮತ್ತೆ ಗುಸುಗುಸು ಶಬ್ದ ಕೇಳಿದಾಗ ‘ಜನರ ಧ್ವನಿ ಕಡಿಮೆಯಾಗದ ಹೊರತು ಗೋಷ್ಠಿಯನ್ನು ಮುಂದುವರಿಸುವುದಿಲ್ಲ’ ಎಂದು ವಿವೇಕ ಅವರು ಆಯೋಜಕರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು. ವಾತಾವರಣ ನಿಶ್ಶಬ್ಧವಾದ ಬಳಿಕ ಗೋಷ್ಠಿಯನ್ನು ಮುಂದುವರಿಸಿದರು.
ಸಾಹಿತ್ಯೋತ್ಸವಕ್ಕೆ ಬಂದಿದ್ದ ಹತ್ತಾರು ಇಂಗ್ಲಿಷ್ ಭಾಷೆ ಲೇಖಕರ ಹಸ್ತಾಕ್ಷರ ಪಡೆಯಲು ಓದುಗರ ದೊಡ್ಡ ಸಾಲೇ ಇತ್ತು. ಆದರೆ ಇದು ಕನ್ನಡ ಸಂದರ್ಭದಲ್ಲಿ ಕಷ್ಟ ಅನಿಸಿತು ಎಂದು ಲೇಖಕ ಟಿ.ಎಸ್. ಗೊರವರ ಬೇಸರಿಸಿದರು. ‘ನಮ್ಮಲ್ಲಿ ಓದು ಮತ್ತು ಬರವಣಿಗೆಗಾಗಿಯೇ ಸಂಬಳ ಪಡೆಯುತ್ತಿರುವ ಶಿಕ್ಷಕರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಪಿಎಚ್.ಡಿ ಸ್ಕಾಲರ್‌ಗಳಲ್ಲಿ ಓದುವಿಕೆಯೇ ಇಲ್ಲದಂತಾಗಿದೆ. ಇವರೆಲ್ಲರೂ ಹೆಚ್ಚು ಹೆಚ್ಚು ಓದಿದರೆ ಬರವಣಿಗೆ ಹೆಚ್ಚಾಗಿಯೂ ಚೆನ್ನಾಗಿಯೂ ಹುಟ್ಟಿಕೊಳ್ಳುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.