ADVERTISEMENT

ಆಟೊಗಳಲ್ಲಿ ಅನ್ಯ ಭಾಷಿಕರಿಗೆ ‘ಕನ್ನಡ ಪಾಠ’

ಸಂಚಾರ ವಿಭಾಗದ ಪೊಲೀಸರ ಅಭಿಯಾನಕ್ಕೆ ಲಕ್ಷಕ್ಕೂ ಹೆಚ್ಚು ಚಾಲಕರ ಬೆಂಬಲ

ಕೆ.ಎಸ್ ಸುನಿಲ್
Published 12 ನವೆಂಬರ್ 2024, 23:50 IST
Last Updated 12 ನವೆಂಬರ್ 2024, 23:50 IST
   

ಬೆಂಗಳೂರು: ನಗರದಲ್ಲಿ ನೆಲೆಸಿರುವ ಅನ್ಯ ಭಾಷಿಕರಿಗೆ ‘ಕನ್ನಡ ಭಾಷೆ’ ಕಲಿಸುವ ಸಂಚಾರ ವಿಭಾಗದ ಪೊಲೀಸರ ವಿನೂತನ ಅಭಿಯಾನಕ್ಕೆ ಲಕ್ಷಕ್ಕೂ ಅಧಿಕ ಆಟೊ ಚಾಲಕರು ಕೈ ಜೋಡಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

‘ಕನ್ನಡ ಕಲಿಸಿ, ಕನ್ನಡ ಬಳಸಿ’ ಎಂಬ ಧ್ಯೇಯ ವಾಕ್ಯದಡಿ ಆಟೊಗಳಿಗೆ ಪ್ರದರ್ಶಕ ಫಲಕಗಳನ್ನು ವಿತರಿಸಲಾಗಿದ್ದು, ಅದರಲ್ಲಿ ಕನ್ನಡ ಪದಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. ಇದರಿಂದ ಚಾಲಕ ಮತ್ತು ಪರಭಾಷಿಕ ಪ್ರಯಾಣಿಕರ ನಡುವೆ ಸಂವಹನದಲ್ಲಿನ ತೊಡಕು ನಿವಾರಣೆಗೆ ಅನುಕೂಲ ಕಲ್ಪಿಸಲಾಗಿದೆ. ಇದರ ಮೂಲಕ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಆರಂಭವಾಗಿದೆ.

ನಗರದ ಪ್ರತಿ ಸಂಚಾರ ಪೊಲೀಸ್ ಠಾಣೆಗಳ ಪೊಲೀಸರು ಆಟೊ ಚಾಲಕರಿಗೆ ಪ್ರದರ್ಶಕ ಫಲಕಗಳನ್ನು ವಿತರಿಸಿದ್ದಾರೆ. ಇವುಗಳನ್ನು ಮೀಟರ್‌ ಬಾಕ್ಸ್ ಬಳಿ ಚಾಲಕರು ಅಳವಡಿಸಿಕೊಂಡಿದ್ದಾರೆ. ಫಲಕದಲ್ಲಿ ಕ್ಯೂಆರ್‌ ಕೋಡ್ ನೀಡಲಾಗಿದ್ದು, ಮೊಬೈಲ್‌ಗಳಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನರ್‌ ಬಳಸಿ ಸಂವಹನ ನಡೆಸಬಹುದಾಗಿದೆ. ಅನ್ಯಭಾಷಿಕರ ಜತೆ ಸಂವಹನ ಹೇಗೆ ನಡೆಸಬೇಕು? ಎಂಬುದರ ಕುರಿತು ಆಟೊ ಚಾಲಕರಿಗೆ ಮಾರ್ಗದರ್ಶನ ನೀಡಲಾಗಿದೆ. ತುರ್ತು ಸೇವೆಯ ನಂಬರ್‌ 112 ಅನ್ನೂ ಸಹ ಪ್ರದರ್ಶಿಸಲಾಗಿದೆ.

ADVERTISEMENT

ಸಂಚಾರ ಪೊಲೀಸರ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯವನ್ನು ಶ್ಲಾಘಿಸಿದ್ದಾರೆ.

‘ಕನ್ನಡೇತರರು ಕನ್ನಡದ ಕೆಲವು ಪದಗಳನ್ನು ಕಲಿಯುವುದರಿಂದ ನಮ್ಮ ಜತೆ ಸಂವಹನ ನಡೆಸಲು ಅನುಕೂಲವಾಗುತ್ತದೆ. ಚಾಲಕರೊಂದಿಗೆ ಸ್ನೇಹಪರ ಸಂಪರ್ಕ ಹೊಂದಲು ಇದು ಉತ್ತಮ ಮಾರ್ಗವಾಗಿದೆ. ಪ್ರದರ್ಶಕ ಫಲಕಗಳನ್ನು ನೋಡಿ, ಕೆಲ ಪ್ರಯಾಣಿಕರು ಕನ್ನಡ ಕಲಿಯಲು ಪ್ರಯತ್ನಿಸಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ಆಟೊ ಚಾಲಕ ಸುರೇಶ್ ಹೇಳಿದರು.

ಅಜ್ಮಲ್‌ರ ಕನ್ನಡದ ಕೆಲಸ ಪ್ರೇರಣೆ:

ನಿತ್ಯ ತನ್ನ ಆಟೊದಲ್ಲಿ ಪ್ರಯಾಣಿಸುವ ಕನ್ನಡೇತರರಿಗೆ ಕನ್ನಡ ಕಲಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಆಟೊ ಚಾಲಕ ಅಜ್ಮಲ್ ಸುಲ್ತಾನ್‌ ಅವರಿಂದ ಪ್ರೇರೇಪಿತರಾಗಿ ಸಂಚಾರ ವಿಭಾಗದ ಪೊಲೀಸರು ಈ ಅಭಿಯಾನ ಆರಂಭಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಅಜ್ಮಲ್ ಅವರು ಹತ್ತು ವರ್ಷದಿಂದ ನಗರದಲ್ಲಿ ನೆಲೆಸಿದ್ದಾರೆ. ತಮ್ಮ ಆಟೊದಲ್ಲಿ ಪ್ರಯಾಣದ ಸಂದರ್ಭದಲ್ಲಿ ಅಗತ್ಯವಿರುವ ಕನ್ನಡದ ಕೆಲ ವಾಕ್ಯಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಬರೆದ ಫಲಕ ಹಾಕಿಕೊಂಡಿದ್ದಾರೆ. ಇಲ್ಲಿ ಕನ್ನಡ ಭಾಷೆಯೂ ಇಂಗ್ಲಿಷ್ ಪದದಲ್ಲಿ ಇರುವುದರಿಂದ ಪರಭಾಷಿಕರು ಸರಳವಾಗಿ ಓದಿ ಅರ್ಥೈಸಿಕೊಂಡು ಬಳಸಬಹುದು.

ಸಂಚಾರ ವಿಭಾಗದ ಪೊಲೀಸರು ನೀಡಿರುವ ಫಲಕಗಳಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಪ್ರಯಾಣಿಕರ ಪ್ರಶ್ನೆಯೊಂದಿಗೆ ಚಾಲಕರ ಉತ್ತರದ ಮಾದರಿಯೂ ಒಳಗೊಂಡಿದೆ.

‘ಈವರೆಗೂ ಒಂದು ಸಾವಿರ ಫ‌ಲಕಗಳನ್ನು ಮುದ್ರಿಸಿ ಆಟೊ ಚಾಲಕರಿಗೆ ನೀಡಲಾಗಿದೆ. ಇದಕ್ಕೆ ವಿವಿಧ ಸಂಘಟನೆಗಳು ಸಹಕಾರ ನೀಡಿವೆ.ಈ ಫ‌ಲಕ ನೋಡಿ ಕನ್ನಡೇತರರು ಕನ್ನಡ ಕಲಿಯಲು ಆರಂಭಿಸಿದ್ದಾರೆ. ಕನ್ನಡ ಕಲಿಯಲು ಅವಕಾಶ ಹಾಗೂ ಸಮಯದ ಕೊರತೆಯಿರುತ್ತದೆ. ಇಂತಹ ಪ್ರಯಾಣಿಕರಿಗೆ ಆಟೊದಲ್ಲಿ ಪ್ರಯಾಣಿಸುವಾಗಲೇ ಕನ್ನಡ ಪದಗಳನ್ನು ಹೇಳಿಕೊಟ್ಟು, ಬಳಸಿದ ಉದಾಹರಣೆಗಳು ಇವೆ’ ಎಂದು ಅಜ್ಮಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.