ಬೆಂಗಳೂರು: ಸರ್ಕಾರ ಪೆಟ್ರೊಲ್, ಡೀಸೆಲ್ ಮೇಲಿನ ತೆರಿಗೆ ಏರಿಸಿರುವ ಹಿನ್ನೆಲೆಯಲ್ಲಿ ಕೆಲವು ಆಟೊ ಸಂಘಗಳು ಸರ್ಕಾರಕ್ಕೆ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದರೆ, ಇನ್ನೂ ಕೆಲವು ಸಂಘಗಳು ದರ ಏರಿಕೆ ಬೇಡ, ಈಗಿರುವ ದರವೇ ಇರಲಿ’ ಎಂದು ಸಲಹೆ ನೀಡಿವೆ.
ಈಗ ಮೊದಲ ಎರಡು ಕಿಲೋಮೀಟರ್‌ಗೆ ಕನಿಷ್ಠ ದರ ₹30 ಹಾಗೂ ಆ ನಂತರದ ಪ್ರತಿ ಕಿಲೋಮೀಟರ್‌ಗೆ ₹15 ದರವಿದೆ. ಕಳೆದ ಮೂರು ವರ್ಷಗಳಿಂದ ಈ ದರ ಚಾಲ್ತಿಯಲ್ಲಿದೆ. ಅದನ್ನು ಮೊದಲ 2 ಕಿಲೋಮೀಟರ್‌ಗೆ ಕನಿಷ್ಠ ದರ ₹40 ಹಾಗೂ ಆ ನಂತರದ ಪ್ರತಿ ಕಿಲೋಮೀಟರ್‌ಗೆ ₹20ಕ್ಕೆ ಏರಿಸಬೇಕು ಎಂದು ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್, ಆದರ್ಶ ಆಟೊ ಯೂನಿಯನ್‌ಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿವೆ.
ತೈಲ ಬೆಲೆ ಏರಿಕೆಯಲ್ಲದೇ, ಆಟೊ ಬಿಡಿಭಾಗಗಳ ದರವೂ ಹೆಚ್ಚಾಗಿದೆ. ಜೀವನ ನಿರ್ವಹಣಾ ವೆಚ್ಚ ಅಧಿಕಗೊಂಡಿದೆ. ಆದರೆ, 2021ರ ಡಿಸೆಂಬರ್‌ನಲ್ಲಿ ನಿಗದಿಯಾದ ಆಟೊ ದರವೇ ಈಗಲೂ ಇದೆ. ಆಗ ಆಟೊ ಚಾಸಿಗೆ ₹1.5 ಲಕ್ಷ ಇದ್ದಿದ್ದು, ಈಗ ₹2.70 ಲಕ್ಷ ಆಗಿದೆ. ಒಂದು ಕೊಠಡಿಯ ಮನೆ ಬಾಡಿಗೆ ಆಗ ₹4,500ಕ್ಕೆ ಸಿಗುತ್ತಿತ್ತು. ಈಗ ಎರಡು ಪಟ್ಟು ಹೆಚ್ಚಾಗಿದೆ. ಓಲಾ, ಉಬರ್, ರ‍್ಯಾಪಿಡೊಗಳಲ್ಲಿ ಅಧಿಕ ದರ ಪಡೆಯುತ್ತಿದ್ದಾರೆ. ಜೀವನ ಸಾಗಿಸುವುದು ಕಷ್ಟವಾಗಿರುವುದರಿಂದ ಆಟೊ ಚಾಲಕರು ಕೂಡಾ ಅನಧಿಕೃತವಾಗಿ ಹೆಚ್ಚುವರಿ ದರ ಪಡೆಯುತ್ತಿದ್ದಾರೆ. ಯಾರೂ ನಿಗದಿತ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿಲ್ಲ. ಅನಧಿಕೃತ ದರವನ್ನೇ ಅಧಿಕೃತವನ್ನಾಗಿ ಮಾಡಲಿ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಮಂಜುನಾಥ್ ವಿವರ ನೀಡಿದರು.
‘ಈಗಿರುವ ದರವೇ ಸಾಕು. ಆದರೆ, ಆ್ಯಪ್ ಆಧಾರಿತ ಬೈಕ್, ಆಟೊ, ಟ್ಯಾಕ್ಸಿಗಳಿಗೆ ಕಡಿವಾಣ ಹಾಕುವ ಮೂಲಕ ನಮಗೆ ದುಡಿಮೆ ಹೆಚ್ಚು ಸಿಗುವಂತೆ ಮಾಡಿ. ದರ ಹೆಚ್ಚಳ ಮಾಡಿದರೆ ಈಗಿರುವ ಗ್ರಾಹಕರು ಕೂಡ ನಮ್ಮ ಕೈ ತಪ್ಪಲಿದ್ದಾರೆ’ ಎಂದು ಬೆಂಗಳೂರು ಸಾರಥಿ ಸೇನೆ, ಸ್ನೇಹಜೀವಿ ಆಟೊ ಚಾಲಕರ ಟ್ರೇಡ್ ಯೂನಿಯನ್, ಕರುನಾಡ ಸಾರಥಿ ಸೇನೆ ಟ್ರೇಡ್ ಯೂನಿಯನ್, ಬೆಂಗಳೂರು ಆಟೊ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
‘ಆಟೊ ದರ ಸರಿಯಾಗಿದೆ. ಅದನ್ನು ಹೆಚ್ಚಿಸಿದರೆ ಸಮಸ್ಯೆಯನ್ನು ಎದುರು ಹಾಕಿಕೊಂಡಂತಾಗುತ್ತದೆ. ಈಗಲೇ ರ‍್ಯಾಪಿಡೊ ಬೈಕ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಿದೆ. ಆಟೊ ದರ ಹೆಚ್ಚಿಸಿದರೆ ನಾವು ಪ್ರಯಾಣಿಕರನ್ನು ಕಳೆದುಕೊಳ್ಳಲಿದ್ದೇವೆ. ಅದರ ಬದಲು ರ‍್ಯಾಪಿಡೊ ಬೈಕ್‌ಗಳನ್ನು ಹೆಸರಿಗಷ್ಟೇ ನಿಷೇಧ ಮಾಡುವ ಬದಲು ಕಾನೂನು ಕ್ರಮಕೈಗೊಂಡು ನಿಯಂತ್ರಿಸಿದರೆ ಆಟೊಗಳನ್ನು ಬಳಸುವ ಗ್ರಾಹಕರ ಪ್ರಮಾಣ ಹೆಚ್ಚಲಿದೆ’ ಎಂದು ಬೆಂಗಳೂರು ಸಾರಥಿ ಸೇನೆ ಅಧ್ಯಕ್ಷ ಬಿ. ರಾಮೇಗೌಡ ತಿಳಿಸಿದರು.
‘ಬೆಲೆ ಏರಿಕೆಯಿಂದ ಜನರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಆಟೊ ದರ ಏರಿಸಿದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮಾನವೀಯ ದೃಷ್ಟಿಯಿಂದ ಆಟೊ ದರ ಹೆಚ್ಚಿಸದೇ ಇರುವುದು ಒಳ್ಳೆಯದು. ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೊ, ಬೈಕ್‌ಗಳಿಗೆ ಕಡಿವಾಣ ಹಾಕಿದರೆ ಸಾಕು. ಸಾರಿಗೆ ಸಚಿವರಿಗೆ ಇದನ್ನೇ ನಾವು ತಿಳಿಸಿದ್ದೇವೆ’ ಎಂದು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ವಿವರಿಸಿದರು.
ಆಟೊ ದರ ಏರಿಸಬೇಕು ಎಂದು ಕೆಲವು ಸಂಘಟನೆಗಳು ಮನವಿ ಸಲ್ಲಿಸಿವೆ. ಕೆಲವರು ಬೇಡ ಎಂದು ಹೇಳಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.